ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 93ನೇ ಅಧಿವೇಶನದ ಸರ್ವಧರ್ಮ ಸಮ್ಮೇಳನ – 2025ವು ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಇಂದು ನಡೆಯಿತು. ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಡಾ. ಎಮ್. ಬಿ. ಪಾಟೀಲ್ ಅವರು ಉದ್ಘಾಟಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣದಲ್ಲಿ, ಕಾರ್ತಿಕ ಮಾಸದಲ್ಲಿ ಕತ್ತಲು ದೀರ್ಘವಾಗಿರುತ್ತದೆ. ಈ ಕತ್ತಲನ್ನು ಹೋಗಲಾಡಿಸುವ, ಬದುಕಿಗೆ ಬೆಳಕನ್ನು ಕೊಡುವ ಈ ಲಕ್ಷದೀಪೋತ್ಸವ ಎಲ್ಲರ ಮನೆ-ಮನವನ್ನು ಬೆಳಗಲಿ. ದೀಪ ಕೇವಲ ಹಣತೆಯಲ್ಲ. ಆ ದೀಪವು ಅಂಧಕಾರ, ಅಜ್ಞಾನ, ದುಶ್ಚಟ, ಮೌಡ್ಯ, ಬಡತನ, ಅನಕ್ಷರತೆ, ದುರ್ಬಲತೆಯನ್ನು ಹೋಗಲಾಡಿಸುವ ಜ್ಞಾನ ದೀಪವಾಗಿದೆ. ಇಂತಹ ಸತ್‌ಕಾರ್ಯವನ್ನು ಶ್ರೀ ಕ್ಷೇತ್ರದಿಂದ ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಈ ಮೂಲಕ ಬೆಳಕಿನ ತೇರು ಎಲ್ಲರ ಬದುಕನ್ನು ಬೆಳಗುತ್ತಿದೆ. ಈ ಕಾರ್ತಿಕ ಮಾಸದ ಉತ್ಸವದಲ್ಲಿ ದೇವರು ಗರ್ಭಗುಡಿಯಿಂದ ಹೊರಗೆ ಬಂದು ಎಲ್ಲಾ ಸದ್ಭಕ್ತರಿಗೆ ದರ್ಶನ ನೀಡಿ ಹರಸುತ್ತಾನೆ. ಆ ಮೂಲಕ ಎಲ್ಲರ ಜೀವನದಲ್ಲಿ ಬೆಳಕಿನ ಪ್ರಭೆ ಮೂಡಿಸುತ್ತಾನೆ ಎಂದು ಆಶೀರ್ವಾದಗೈದರು.
ಶ್ರೀ ಶಾರದಾ ಲಕ್ಷ್ಮೀನೃಸಿಂಹ ಪೀಠಂ, ಶ್ರೀಮಠ, ಹರಿಹರಪುರದ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿಯವರು ಅಧ್ಯಕ್ಷ ಸ್ಥಾನ ವಹಿಸಿದ್ದರು. ವೇದಿಕೆಯಲ್ಲಿ ಎಸ್ ಡಿಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ., ಪ್ರಜಾವಾಣಿ ಮುಖ್ಯ ಉಪಸಂಪಾದಕರಾದ ಸೂರ್ಯಪ್ರಕಾಶ ಪಂಡಿತ್ ಹಾಗೂ ರಾಷ್ಟ್ರೀಯ ಚಿಂತಕರಾದ ತನ್ನೀರ್ ಅಹಮ್ಮದ್ ಉಲ್ಲಾ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಭವ್ಯವಾದ ಮೆರವಣಿಗೆಯಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರಾರ್ಥನೆಗೈದರು.


