ಬೆಂಗಳೂರು : ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ ಹಿನ್ನಲೆಯಲ್ಲಿ ಶನಿವಾರ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸರ್ಕಾರವೇ ಲಿಖಿತ ಆದೇಶ ನೀಡಿದೆ ಎನ್ನುವ ಅರ್ಥದ ಆರ್ಡರ್ ಕಾಪಿ ಫೋಟೋಗಳು ವೈರಲ್ ಆಗಿದ್ದವು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು, ‘ಸಾಲು ಮರದ ತಿಮ್ಮಕ್ಕ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎನ್ನುವುದು ಸುಳ್ಳು. ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಹರಿದಾಡುತ್ತಿರುವ ಪತ್ರ ನಕಲಿಯದ್ದಾಗಿದೆ’ ಎಂದು ಸ್ಪಷ್ಟನೆ ನೀಡಿದೆ. ಅದರಿಂದಾಗಿ ಶನಿವಾರ ಎಂದಿನಂತೆ ಶಾಲಾ ಕಾಲೇಜುಗಳು ಇರಲಿದೆ ಎಂದು ಸರ್ಕಾರ ತಿಳಿಸಿದೆ.
ಖ್ಯಾತ ಪರಿಸರವಾದಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114) ಇಂದು ಬೆಳಿಗ್ಗೆ ನಿಧನರಾದರು. ಉಸಿರಾಟದ ತೊಂದರೆಯಿಂದಾಗಿ ನವೆಂಬರ್ 2 ರಿಂದ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿರಂತರ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ‘ವೃಕ್ಷಮಾತೆ’ (ವೃಕ್ಷಗಳ ತಾಯಿ) ಎಂದು ಪ್ರೀತಿಯಿಂದ ಕರೆಯಲ್ಪಡುವ ತಿಮ್ಮಕ್ಕ ಚೇತರಿಸಿಕೊಳ್ಳಲಿಲ್ಲ ಮತ್ತು ಚಿಕಿತ್ಸೆಯ ಸಮಯದಲ್ಲಿ ನಿಧನರಾದರು.


