ಬೆಳ್ತಂಗಡಿ, ಜು. 23 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಳ್ತಂಗಡಿ ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಜು.22 ರಂದು ಮಹಾಮಂಡಲೇಶ್ವರ 1008 ಶ್ರೀ ಬ್ರಹ್ಮಾನಂದ ಸರಸ್ಕೃತಿ ಸ್ವಾಮೀಜಿ ಅವರನ್ನು ಕನ್ಯಾಡಿಯಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಮಹಾಮಂಡಲೇಶ್ವರ ಶ್ರೀರಾಮ ಕ್ಷೇತ್ರ ಕನ್ಯಾಡಿಯಲ್ಲಿ ನಡೆದ ಈ ಭೇಟಿಯು ಯುವವಾಹಿನಿಯ ನೂತನ ವರ್ಷದ ಚಟುವಟಿಕೆಗಳಿಗೆ ಹೊಸ ಹುರುಪು ನೀಡಿದಂತಾಯಿತು.

ಸ್ವಾಮೀಜಿ ಅವರು ಯುವವಾಹಿನಿಯ ಸೇವಾ ಮನೋಭಾವವನ್ನು ಶ್ಲಾಘಿಸಿ, “ಯುವಶಕ್ತಿಯೇ ದೇಶದ ಭವಿಷ್ಯ. ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಬದಲಾವಣೆ ತರಬಹುದು. ನಿಮ್ಮ ಎಲ್ಲಾ ಒಳ್ಳೆಯ ಕಾರ್ಯಗಳಿಗೆ ನನ್ನ ಸಂಪೂರ್ಣ ಆಶೀರ್ವಾದವಿದೆ” ಎಂದು ಹಾರೈಸಿದರು.
ನೂತನ ಪದಾಧಿಕಾರಿಗಳು ಸ್ವಾಮೀಜಿಗೆ ಫಲ-ಪುಷ್ಪ ಸಮರ್ಪಿಸಿ ಸನ್ಮಾನಿಸಿದರು. ಘಟಕವು ಕಳೆದ ವರ್ಷ ನಡೆಸಿದ ರಕ್ತದಾನ ಶಿಬಿರ, ವಿದ್ಯಾರ್ಥಿ ವೇತನ ವಿತರಣೆ, ಉದ್ಯೋಗ ಮಾರ್ಗದರ್ಶನ, ಆರೋಗ್ಯ ತಪಾಸಣಾ ಶಿಬಿರಗಳ ಬಗ್ಗೆ ವಿವರಿಸಿದರು.2026-27ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ, ಯುವಜನರಿಗೆ ಸ್ವ-ಉದ್ಯೋಗ ಪ್ರೋತ್ಸಾಹ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಗೌರವ ಅಧ್ಯಕ್ಷರು ಮತ್ತು ಸ್ಥಾಪಕ ರಾಕೇಶ್ ಮೂಡುಕೊಡಿ, ಅಧ್ಯಕ್ಷೆ ಲೀಲಾವತಿ, ಪ್ರಧಾನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಳಂಜ, ಕೋಶಾಧಿಕಾರಿ ಸುದೀಪ್ ಸಾಲಿಯನ್, ಉಪಾಧ್ಯಕ್ಷ ಸುನಿಲ್ ಕುಮಾರ್ ಕನ್ಯಾಡಿ, ನಾರಾಯಣ ತತ್ತ್ವ ವಿಚಾರ ನಿರ್ದೇಶಕ ಯಶೋಧರ ಮುಂಡಾಜೆ, ವ್ಯಕ್ತಿತ್ವ ಮತ್ತು ವಿಕಾಸ ನಿರ್ದೇಶಕ ಜ್ಞಾನೇಶ್ ಕುಮಾರ್, ಪ್ರಚಾರ ನಿರ್ದೇಶಕ ಜಿತೇಶ್ ಬೆಳ್ತಂಗಡಿ, ಸಾಂಸ್ಕೃತಿಕ ನಿರ್ದೇಶಕ ಮೋಹನ್ ಕನರ್ಪ, ನಿಶಾನ್ ಬಂಗೇರ, ಶಾಂತಿ ಮದ್ದಡ್ಕ, ರಮ್ಯ ಕೋಟ್ಯಾನ್, ದಿನೇಶ್ ಕಾರ್ದೊಟ್ಟು, ಜಯಕುಮಾರ್ ಶಿರ್ಲಾಲು, ವಸಂತ ಪೂಜಾರಿ ಪಣಕಜೆ, ಬೇಬಿ ಕಶ್ಚಿ ಸೇರಿದಂತೆ ಘಟಕದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.


