ಬೆಳ್ತಂಗಡಿ, ಜ. 13 : ಯಾವುದೇ ಅನುಮತಿಗಳನ್ನು ಪಡೆಯದೆ ಅನಧಿಕೃತವಾಗಿ ಖಾಸಗಿ ಶಾಲೆಯ ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಕೂಡಾ ಸಂಬಂಧಪಟ್ಟ ಅಧಿಕಾರಿ ವರ್ಗ ಮೌನ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕರಿಮಣೇಲು ಗ್ರಾಮದಲ್ಲಿ ಮೂಡಬಿದಿರೆಯ ನಿವಾಸಿ ಡಾ. ಶರತ್ ಗೋರೆ ಎಂಬವರ ಮಾಲೀಕತ್ವದ “ಬೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್/ಬೆಸ್ಟ್ ವಸತಿ ಶಾಲೆ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ಬೃಹತ್ ಮಹಡಿಯನ್ನು ನಿರ್ಮಾಣ ಕಾಮಗಾರಿ ಕೆಲಸ ಮಾಡಲಾಗುತ್ತಿದೆ ಎನ್ನಲಾಗಿದೆ.
ಈ ಬೃಹತ್ ಕಟ್ಟಡಗಳಿಗೆ ಸಂಬಂಧಪಟ್ಟ ಪಂಚಾಯತ್ ನಿಂದ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ, ಅದಲ್ಲದೆ ಈ ಕಟ್ಟಡ ನಿರ್ಮಾಣಕ್ಕೆ ಯಾವ ದಾಖಲೆಗಳನ್ನು ಮಾಡಿಕೊಂಡಿಲ್ಲ ಎಂಬ ದೂರುಗಳು ಬರುತ್ತಿದೆ. ಈ ಅಕ್ರಮ ಕಟ್ಟಡ ಕಾಮಗಾರಿಯ ಮಾಡುತ್ತಿರುವ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ವೇಣೂರು ಅಭಿವೃದ್ಧಿ ಅಧಿಕಾರಿಗಳಿಗೆ ಜ.12 ರಂದು ಲಿಖಿತ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ.
ಈ ಅಕ್ರಮ ಕಟ್ಟಡ ನಿರ್ಮಾಣವನ್ನು ತಕ್ಷಣ ತಡೆ ಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


