ಕಾರ್ಕಳ, ಜ. 13 : ಅತ್ಯಂತ ಕಿರಿದಾದ ತಿರುವುಗಳಿಂದ ಕೂಡಿರುವ ಸದಾ ಅಪಘಾತ, ನೈಸರ್ಗಿಕ ವಿಕೋಪ ಸಮಸ್ಯೆ ಹಾಗೂ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಮಲೆನಾಡು ಮತ್ತು ಕರಾವಳಿ ಜಿಲ್ಲೆ ಸಂಪರ್ಕಿಸುವ ಪ್ರಮುಖ ಕೊಂಡಿ ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಈ ರಸ್ತೆಯನ್ನು ಅತ್ಯಾಧುನಿಕ ‘ಕ್ಯಾಂಟಲಿರ್ವ’ ತಂತ್ರಜ್ಞಾನದ ಮೂಲಕ ಅಗಲೀಕರಣಗೊಳಿಸುವ ಬೃಹತ್ ಯೋಜನೆಯ ಕಾರ್ಯ ಸಾಧ್ಯತೆಯ ಬಗ್ಗೆತಯಾರಿ ನಡೆಸಲಾಗುತ್ತಿದೆ.
ಪ್ರಸ್ತುತ ಆಗುಂಬೆ ಘಾಟಿ ರಸ್ತೆಯು ಕೇವಲ 5.10 ಮೀಟರ್ ಅಗಲವಿದ್ದು, ಎರಡು ದೊಡ್ಡ ವಾಹನಗಳು ಮುಖಾಮುಖೀಯಾದಾಗ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗುವುದು ಸಾಮಾನ್ಯವಾಗಿದೆ. ಈ ರಸ್ತೆಯನ್ನು 9ರಿಂದ 10 ಮೀ. ಅಗಲಗೊಳಿಸಿ ಅಭಿವೃದ್ಧಿಪಡಿಸಲು ಹೆದ್ದಾರಿ ಇಲಾಖೆ ಯೋಚಿಸಿದೆ. ಇದಕ್ಕಾಗಿ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಈಗಾಗಲೇ ಟೆಂಡರ್‌ಕರೆಯಲಾಗಿದ್ದು, ಇದಕ್ಕೆ ಅನುದಾನವನ್ನು ಮೀಸಲಿಡಲಾಗಿದೆ.
ಏನಿದು “ಕ್ಯಾಂಟಿಲಿರ್ವ’ ತಂತ್ರಜ್ಞಾನ?
ಪಶ್ಚಿಮ ಘಟ್ಟ ಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಗುಡ್ಡಗಳನ್ನು ಅಗೆಯುವುದು ಭೂಕುಸಿತಕ್ಕೆ ಆಹ್ವಾನ ನೀಡಿದಂತೆ. ಹೀಗಾಗಿ ಬೆಟ್ಟವನ್ನು ಕತ್ತರಿಸುವ ಬದಲು ರಸ್ತೆಯ ಪಾರ್ಶ್ವದಲ್ಲಿ ಬಲಿಷ್ಠ ಪಿಲ್ಲರ್‌ಗಳನ್ನು ನಿರ್ಮಿಸಿ, ಅವುಗಳ ಮೇಲೆ ಕಾಂಕ್ರೀಟ್ ಸ್ಟ್ರಾಬ್‌ಗಳನ್ನು ಚಾಚುವ ಮೂಲಕ ರಸ್ತೆಯನ್ನು ವಿಸ್ತರಿಸಲಾಗುತ್ತದೆ. ಈ ಕಾರ್ಯದಿಂದ ಬೆಟ್ಟದ ನೈಸರ್ಗಿಕ ರಚನೆಗೆ ಹಾನಿಯಾಗುವುದಿಲ್ಲ. ಮರಗಳ ಮಾರಣಹೋಮ ಮತ್ತು ಮಣ್ಣಿನ ಸವೆತವನ್ನು ಗಣನೀಯವಾಗಿ ತಡೆಯಬಹುದು ಎಂಬುದು ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳ ಅಭಿಪ್ರಾಯವಾಗಿದೆ. ಮಹಾರಾಷ್ಟ್ರದ ಮಲ್ವೇಜ್ ಮತ್ತು ಉತ್ತರಖಂಡ ಪ್ರದೇಶಗಳಲ್ಲಿನ ಘಾಟಿ ಭಾಗದಲ್ಲಿ ಈ ತಂತ್ರಜ್ಞಾನದಲ್ಲಿ ರಸ್ತೆ ವಿಸ್ತರಣೆಗೊಳಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಅರಣ್ಯ ಇಲಾಖೆ ಅನುಮತಿ ಸವಾಲು
ಆಗುಂಬೆ ಘಾಟಿ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವುದರಿಂದ, ಈ ಯೋಜನೆಗೆ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯಬೇಕಿದೆ. ತಂತ್ರಜ್ಞಾನವು ಪರಿಸರ ಸ್ನೇಹಿಯಾಗಿದ್ದರೂ, ಕಾಮಗಾರಿಯ ಸಮಯದಲ್ಲಿ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ಇಲಾಖೆಯ ಮೇಲಿದೆ. ಅಲ್ಲದೆ ಈ ಭಾಗದಲ್ಲಿ ಅಳಿವಂಚಿನಲ್ಲಿರುವ ಸಿಂಗಳೀಕ ಮತ್ತು ಕಾಳಿಂಗ ಸರ್ಪ ಜೀವವೈವಿದ್ಯತೆ ಅತೀ ಸೂಕ್ಷ್ಮ ವಿಚಾರವಾಗಿದೆ.

