ಅಹ್ಮದಾಬಾದ್ : ಐಸಿಸಿ ಟಿ20 ವಿಶ್ವಕಪ್ 2026 ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಮಾರ್ಚ್ 8ರ ಭಾನುವಾರದಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ಮತ್ತು ಬಲಿಷ್ಠ ನ್ಯೂಜಿಲೆಂಡ್ ತಂಡಗಳ ಮಧ್ಯೆ ಫೈನಲ್ ಕದನದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದೇ ಕುತೂಹಲ ! ಅಹ್ಮದಾಬಾದ್ ನ ಕಪ್ಪು ಮಣ್ಣಿನ ಪಿಚ್ ನಲ್ಲಿ ಭಾರತ ಗೆಲುವು ಸಾಧಿಸುತ್ತೋ ಅಥವಾ ಕೀವೀಸ್ ಬಳಗ ಮೇಲುಗೈ ಸಾಧಿಸುತ್ತೋ ಎಂಬುದೇ ಕ್ರೀಡಾಪ್ರೇಮಿಗಳನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ಕಳಪೆ ಪ್ರದರ್ಶನ ಹಾಗೂ ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಭಾರತ ಒಂದೇ ಒಂದು ಪಂದ್ಯ ಸಹ ಗೆದ್ದಿಲ್ಲ !
ಅಂಕಿಅಂಶಗಳನ್ನು ಕಲೆ ಹಾಕಿದರೆ, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಈವರೆಗೂ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 30 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 18 ಬಾರಿ ಗೆದ್ದಿದ್ದರೆ, 11 ಬಾರಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಒಂದು ಪಂದ್ಯ ಟೈ ಆಗಿದೆ. ಇನ್ನು ಟಿ20 ವಿಶ್ವಕಪ್ ಅನ್ನು ಗಣನೆಗೆ ತೆಗೆದುಕೊಂಡರೆ ಇತ್ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಮೂರೂ ಬಾರಿಯೂ ಕಿವೀಸ್ ಬಳಗವೇ ಗೆಲುವಿನ ನಗೆ ಬೀರಿದೆ. ಭಾರತ ತಂಡ ಒಮ್ಮೆಯೂ ಯಶಸ್ವಿಯಾಗಿಲ್ಲ ಎಂಬುದು ಚಿಂತಿಸಬೇಕಾದ ಸಂಗತಿಯೇ ಹೌದು.
ಇನ್ನೂ ಕಳವಳಕಾರಿ ಸಂಗತಿಯೆಂದರೆ 2023ರ ಏಕದಿನ ವಿಶ್ವಕಪ್ ತರುವಾಯ ಭಾರತ ಐಸಿಸಿ ಟೂರ್ನಿಗಳಲ್ಲಿ ಪರಾಭವಗೊಂಡಿರುವುದು ಕೇವಲ ಎರಡು ಪಂದ್ಯಗಳಲ್ಲಿ. ಆ ಎರಡೂ ಪಂದ್ಯಗಳಿಗೆ ಆತಿಥ್ಯ ವಹಿಸಿರುವುದು ಇದೇ ನರೇಂದ್ರ ಮೋದಿ ಕ್ರೀಡಾಂಗಣ. 2023ರ ಏಕದಿನ ವಿಶ್ವಕಪ್ ನಲ್ಲಿ ಅಜೇಯವಾಗಿ ಫೈನಲ್ ತಲುಪಿದ್ದ ಭಾರತ ತಂಡ ಫೈನಲ್ ನಲ್ಲಿ ಎದುಸಿರು ಬಿಟ್ಟುಕೊಂಡು ಪ್ರಶಸ್ತಿ ಹಂತಕ್ಕೆ ತಲುಪಿದ್ದ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇನ್ನು ಈ ಬಾರಿಯ ಟಿ20 ವಿಶ್ವಕಪ್ ನ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ಇದೇ ಪಿಚ್ ನಲ್ಲಿ ಎಡವಿತ್ತು. ಹೀಗಾಗಿಯೇ ಭಾರತ ತಂಡ ಈ ಪಿಚ್ ನಲ್ಲಿ ಬಹಳ ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ.
ಇತ್ತೀಚೆಗೆ ಭಾರತದ ಮೇಲುಗೈ
ಪೂರ್ವ ದಾಖಲೆಗಳು ಏನೇ ಹೇಳಿದರೂ ತಂಡವೊಂದು ನಿರ್ದಿಷ್ಟ ದಿನ ಪರಿಸ್ಥಿತಿ ಮತ್ತು ಒತ್ತಡವನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ತಂಡದ ಸೋಲು ಗೆಲುವುಗಳು ನಿರ್ಧಾರವಾಗುತ್ತವೆ. ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಆಡಿದ ಮೂರಕ್ಕೆ ಮೂರು ಪಂದ್ಯಗಳನ್ನು ಸೋತಿದ್ದರೂ ಇತ್ತೀಚಿನ ದಿನಗಳಲ್ಲಿ ವೈಟ್ ಬಾಲ್ ಕ್ರಿಕೆಟ್ ನಲ್ಲಿ ಕಿವೀಸ್ ಬಳಗವನ್ನು ಕಟ್ಟಿ ಹಾಕಿದೆ ಭಾರತ. ಈ ಟೂರ್ನಿಗೆ ಪೂರ್ವಭಾವಿಯಾಗಿ ನಡೆದಿದ್ದ ಟಿ20 ಸರಣಿಯಲ್ಲಿ ಭಾರತ ತಂಡ 4-1 ಅಂತರದಿಂದ ಅಧಿಕಾರಯುತ ಜಯಗಳಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ನರೇಂದ್ರ ಮೋದಿ ಪಿಚ್ ನಲ್ಲಿ ಈವರೆಗೆ ಒಟ್ಟು 14 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಾಗಿದೆ. ಅದರಲ್ಲಿ 9 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಜಯ ಗಳಿಸಿದ್ದರೆ, 5 ಬಾರಿ ರನ್ ಚೇಸ್ ಮಾಡಿದ ತಂಡ ಗೆಲುವಿನ ಸವಿಯುಂಡಿದೆ. ಈ ಕ್ರೀಡಾಂಗಣದಲ್ಲಿ ಬಂದಿರುವ ಗರಿಷ್ಠ ಮೊತ್ತ 234 ರನ್ ಆಗಿದ್ದರೆ, ಕನಿಷ್ಠ ಮೊತ್ತ 66 ರನ್. ಮೊದಲ ಇನ್ನಿಂಗ್ಸ್ ಸರಾಸರಿ 189 ರನ್.
ಸಮತೋಲಿತ ಪಿಚ್
ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಬೌಂಡರಿ, ಸಿಕ್ಸರ್ ಗಳ ಸುರಿಮಳೆಯನ್ನೇ ಸುರಿಸಿದ್ದವು. ಆದರೆ ಅಹ್ಮದಾಬಾದ್ ನ ಮೈದಾನ ಅಷ್ಟು ಸುಲಭದಲ್ಲಿಲ್ಲ. ಇಲ್ಲಿನ ಬೌಂಡರಿಗಳು ವಾಂಖೆಡೆಯಷ್ಟು ಕಿರಿದಾಗಿಲ್ಲ. ಅಲ್ಲಿ ಸಿಕ್ಸರ್ ಗೆ ಹೋದ ಹೊಡೆತಗಳು ಇಲ್ಲಿ ಕ್ಯಾಚ್ ಔಟ್ ಆಗುವ ಸಂಭವ ಜಾಸ್ತಿ ಇದೆ. ಹೀಗಾಗಿ ಹೊಡೆತಗಳ ಆಯ್ಕೆಯ ವಿಚಾರದಲ್ಲಿ ಬ್ಯಾಟರ್ ಬಹಳ ಜಾಗರೂಕವಾದ ನಿರ್ಧಾರ ತಳೆಯಬೇಕಾಗುತ್ತದೆ. ಇನ್ನು ನಿರ್ದಿಷ್ಟವಾಗಿ ಪಿಚ್ ವಿಚಾರಕ್ಕೆ ಬಂದರೆ ಕಪ್ಪುಮಣ್ಣಿನ ಇಲ್ಲಿನ ಪಿಚ್ ಆರಂಭದಲ್ಲಿ ಬೌಲರ್ ಗಳಿಗೆ ಹೆಚ್ಚು ಸಹಾಯಕವಾಗುವ ಸಾಧ್ಯತೆ ಹೆಚ್ಚಿದೆ. ಚೆಂಡು ಕೊಂಚ ನಿಂತು ಬ್ಯಾಟಿಗೆ ಬರುವ ಹಿನ್ನೆಲೆಯಲ್ಲಿ ಬ್ಯಾಟರ್ ಚಾಣಾಕ್ಷತೆಯಿಂದ ಇನ್ನಿಂಗ್ಸ್ ಕಟ್ಟುವ ಅಗತ್ಯ ಇದೆ. ಹೊತ್ತು ಹೋದಂತೆ ಪಿಚ್ ಬ್ಯಾಟರ್ ಗಳಿಗೆ ಅನುಕೂಲಕಾರಿಯಾಗಿದೆ. ಆರಂಭದಲ್ಲಿ ವೇಗದ ಬೌಲರ್ ಗಳಿಗೆ ಅನುಕೂಲ ಆದರೆ ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ಗಳು ವಿಕೆಟ್ ಕೀಳಬಹುದು. ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಇಬ್ಬನಿ ನೆರವಿಗೆ ಬರಬಹುದು.
ಈ ಹಿಂದಿನ ದಾಖಲೆಗಳನ್ನು ಗಮನಿಸಿದಲ್ಲಿ ಈ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚು ಜಯಗಳಿಸಿದೆ. ಆದರೆ ಸದ್ಯ ಭಾರತದಲ್ಲಿ ರಾತ್ರಿ ವೇಳೆ ಇಬ್ಬನಿಯ ಪ್ರಭಾವ ಜಾಸ್ತಿ ಇರುವುದರಿಂದ ಚೇಸಿಂಗ್ ಮಾಡಿದ ತಂಡಗಳಿಗೇ ಹೆಚ್ಚು ಯಶಸ್ಸು ಸಿಕ್ಕಿದೆ. ಹೀಗಾಗಿ ಇಲ್ಲಿ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಹಾಗೊಂದು ವೇಳೆ ಭಾರತಕ್ಕೆ ಮೊದಲು ಬ್ಯಾಟಿಂಗ್ ಸಿಕ್ಕರೆ ಮುಂಬೈ ಪಂದ್ಯದಂತೆ ದೊಡ್ಡ ಸ್ಕೋರ್ ಮಾಡಲೇಬೇಕಾಗುತ್ತದೆ.!

