ಬ್ರಹ್ಮಾವರ, ಡಿ. 15 : ಆರೋಪಿಯೋರ್ವನನ್ನು ಹುಡುಕುವ ನೆಪದಲ್ಲಿ ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ ಪೊಲೀಸರು ಮನೆ ಮಂದಿಗೆ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಅಕ್ಷತಾ ಪೂಜಾರಿ ಎಂಬವರ ಮನೆಗೆ ಐದು ಮಂದಿ ಪೊಲೀಸರು ಬೆಳಗ್ಗಿನ ಜಾವ 04 ಗಂಟೆಗೆ ಸುಮಾರಿಗೆ ಲೇಡಿ ಕಾನ್ ಸ್ಟೇಬಲ್ ಇಲ್ಲದೆ ಪ್ರವೇಶಿಸಿದ್ದಾರೆಂದು ಆರೋಪಿಸಲಾಗಿದೆ. ಸದ್ಯ, ಪೊಲೀಸರಿಂದ ಹಲ್ಲೆಗೊಳಗಾದ ಅಕ್ಷತಾ ಪೂಜಾರಿ ಎಂಬ ಯುವತಿಯು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿರುವ ಯುವತಿ, : ” ಡಿ. 10ರಂದು ಬೆಳಗ್ಗೆ 04 ಗಂಟೆಗೆ ಸುಮಾರಿಗೆ ಯಾರೋ ಜೋರಾಗಿ ಬಾಗಿಲು ಬಡಿಯುವ ಶಬ್ಧ ಕೇಳಿಸಿತ್ತು. ನಾವು ಹೆದರಿ ಬಾಗಿಲು ತೆರೆದಾಗ ಪೊಲೀಸರು ಏಕಾಏಕಿ ಮನೆಯೊಳಗೆ ನುಗ್ಗಿ ಜಾಲಾಡಿದ್ದಾರೆ. ಆಶಿಕ್ ಎಂಬವನನ್ನು ಹುಡುಕುತ್ತಿದ್ದೇವೆ ಎಂದು ಮಾಹಿತಿ ನೀಡಿದ ಸಂದರ್ಭ, ಆತ ನಮ್ಮ ಮನೆಯಲ್ಲಿ ಇಲ್ಲ ಎಂದರೂ ಅವರು ಕೇಳಲಿಲ್ಲ. ಓರ್ವ ಪೊಲೀಸ್ ಸಿಬ್ಬಂದಿ ನನ್ನ ಕೈ ಹಿಡಿದು ಎಳೆದು, ದೂಡಿ ಹಾಕಿದ್ದಾರೆ. ಆ ಬಳಿಕ ನಾನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರಿಗೆ ಹೇಳಿಕೆಯನ್ನು ಕೊಟ್ಟಾಗ ಠಾಣಾಧಿಖಾರಿ ಆಕೆಯ ಕೇಸನ್ನು ದಾಖಲಿಸದೆ ಪೊಲೀಸರನ್ನು ರಕ್ಷಿಸುವ ಸಲುವಾಗಿ ಅಕ್ಷತಾ ಪೂಜಾರಿ ಮತ್ತು ಆಕೆಯ ತಾಯಿಯ ಮೇಲೆ ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಕೇಸು ದಾಖಲಿಸಿದ್ದಾರೆ. ನಮ್ಮ ಮನೆಗೆ ಪೊಲೀಸರು ಆಗಮಿಸಿದ ವೇಳೆ, ಯಾವುದೇ ಲೇಡಿ ಕಾನ್ ಸ್ಟೇಬಲ್ ಇರಲಿಲ್ಲ. ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ, ನಮಗೆ ನ್ಯಾಯ ದೊರಕಿಸಿಕೊಡಿ.” ಎಂದು ಅಂಗಲಾಚಿದ್ದಾರೆ.
ಇನ್ನು, ಈ ಘಟನೆಯ ಬಗ್ಗೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಳೆದ ಹಲವು ಸಮಯಗಳಿಂದ ರಾತ್ರಿ ಸಮಯದಲ್ಲಿ ವಿನಾ: ಕಾರಣ ಪೊಲೀಸರು ಮನೆಗೆ ಆಗಮಿಸುತ್ತಿರುವ ವಿಚಾರ ಬಹಳಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಉಡುಪಿಯಲ್ಲಿ ನಡೆದ ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶದ ಮಾತುಗಳು ಕೇಳಿ ಬರುತ್ತಿದೆ.

