ಅರುಣಾಚಲಪ್ರದೇಶ, ಜೂ. 24 : ರಾಜ್ಯದ ಲೋವರ್ ಸುಬನ್ಸಿರಿ ಮತ್ತು ಕೇಯಿ ಪನ್ಯೂರ್ ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಮೇಘ ಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿ ಗ್ರಾಮಗಳು ಜಲಾವೃತಗೊಂಡಿದ್ದು, ಮನೆ, ಸೇತುವೆಗಳು ಕೊಚ್ಚಿಕೊಂಡು ಹೋಗಿದೆ.
ಇಟಾನಗರದಲ್ಲಿರುವ ಹವಾಮಾನ ಕೇಂದ್ರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಲೋವರ್ ಸುಬನ್ನಿರಿ ಜಿಲ್ಲೆಯ ಯಜಲಿಯಲ್ಲಿ 24 ಗಂಟೆಗಳಲ್ಲಿ 72.8 ಮಿಮೀ ಮಳೆಯಾಗಿದೆ ಎಂದು ತಿಳಿಸಿದೆ. ಮಂಗಳವಾರ ಬೆಳಗ್ಗೆ 6ಗಂಟೆಯಿಂದ 9 ಗಂಟೆವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಭಾರೀ ಪ್ರಮಾಣದ ನಷ್ಟ ಉಂಟಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದಿಢೀರ್ ಮೇಘ ಸ್ಫೋಟದಿಂದಾಗಿ ಮನೆ, ಸೇತುವೆಗಳು ಕೊಚ್ಚಿಕೊಂಡು ಹೋಗಿದೆ. ಅನಾನಸ್, ಬಾಳೆ, ಕಿತ್ತಳೆ ಹಣ್ಣಿನ ತೋಟಗಳು ನಾಶವಾಗಿದ್ದು, ಒಟ್ಟಾರೆ ಎಷ್ಟು ಹಾನಿಯಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ, 15 ಮನೆಗಳು ನಾಶವಾಗಿದ್ದು, ಪ್ರಮುಖ ಸೇತುವೆ ಕೊಚ್ಚಿಕೊಂಡು ಹೋದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಇನ್ನಷ್ಟು ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ವರದಿ ವಿವರಿಸಿದೆ.


