ದಾವಣಗೆರೆ, ಜೂ. 24 : ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ಸಂಚು ರೂಪಿಸಿದ್ದ ಆಘಾತಕಾರಿ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಶಂಕಿತ ಉಗ್ರ ಸುಹೇಲ್ (20) ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದೇಶವನ್ನೇ ಬೆಚ್ಚಿಬೀಳಿಸುವ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.
ಅಡಿಯೋದಲ್ಲಿ ಸಂಚು ಬಹಿರಂಗ:
‘ನಾನು ಅಯೋಧ್ಯೆ ರಾಮಮಂದಿರವನ್ನು ಬಾಂಬ್‌ನಿಂದ ಸ್ಫೋಟಿಸಲು ಬಯಸುತ್ತೇನೆ’ ಎಂದು ಶಂಕಿತ ಉಗ್ರ ಸುಹೇಲ್ ಸ್ವತಃ ಮಾತನಾಡಿರುವ ಆಡಿಯೋ ಕ್ಲಿಪ್‌ಗಳು ಈಗ ಲಭ್ಯವಾಗಿದ್ದು, ಆತನ ಕೃತ್ಯವನ್ನು ಸಾಬೀತುಪಡಿಸಿವೆ. ಭಾರತದಲ್ಲಿ ದೊಡ್ಡ ಮಟ್ಟದ ಸಮಾಜಘಾತಕ ಚಟುವಟಿಕೆಗಳನ್ನು ನಡೆಸಲು ಈತ ಗಂಭೀರ ಯೋಜನೆ ರೂಪಿಸುತ್ತಿದ್ದ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಪಾಕಿಸ್ತಾನದ ಲಿಂಕ್ ಪತ್ತೆ:
ಬಂಧಿತ ಶಂಕಿತ ಉಗ್ರನ ಮೊಬೈಲ್ ಫೋನ್ ಪರಿಶೀಲಿಸಿದಾಗ ಅಂತರರಾಷ್ಟ್ರೀಯ ಮಟ್ಟದ ಉಗ್ರ ಜಾಲದ ಸಂಪರ್ಕ ಇರುವುದು ಪತ್ತೆಯಾಗಿದೆ. ಈತನ ಫೋನ್‌ನಲ್ಲಿ ಪಾಕಿಸ್ತಾನ ದೇಶದ ಕೋಡ್ ಹೊಂದಿರುವ ಮೊಬೈಲ್ ನಂಬರ್ ಒಂದು ‘ರಾಣಾ ಬಾಯ್’ (Rana Bhai) ಎಂಬ ಹೆಸರಿನಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಈತ ಜಾಗತಿಕ ಉಗ್ರರ ಸೋಗಿನಲ್ಲಿ ವಿವಿಧ ಅಪಾಯಕಾರಿ ವೆಪನ್ (ಆಯುಧ) ಗಳನ್ನು ಕೈಯಲ್ಲಿ ಹಿಡಿದುಕೊಂಡು ಫೋಸ್ ನೀಡಿರುವ ಹಲವು ಫೋಟೋಗಳು ಆತನ ಮೊಬೈಲ್‌ನಲ್ಲಿ ಲಭ್ಯವಾಗಿವೆ.
ಗ್ಯಾಂಗ್ ಹಾಗೂ ಡಿಜಿಟಲ್ ಹೆಜ್ಜೆಗುರುತು
ತನಿಖೆಯ ವೇಳೆ ಈತ ಸಾಮಾಜಿಕ ಜಾಲತಾಣಗಳು ಹಾಗೂ ಆನ್‌ಲೈನ್‌ನಲ್ಲಿ ಸಕ್ರಿಯವಾಗಿದ್ದ ‘MEMON & JUTTU- 333’ ಹಾಗೂ ‘RANABHAI 333’ ಎಂಬ ಗ್ರೂಪ್‌ಗಳ ಸದಸ್ಯನಾಗಿರುವುದು ಬೆಳಕಿಗೆ ಬಂದಿದೆ. ಈ ಗ್ರೂಪ್‌ಗಳ ಮೂಲಕವೇ ಆತ ದೇಶವಿರೋಧಿ ಕೃತ್ಯಗಳಿಗೆ ಪ್ರಚೋದನೆ ಮತ್ತು ಸೂಚನೆಗಳನ್ನು ಪಡೆಯುತ್ತಿದ್ದ ಎನ್ನಲಾಗಿದೆ. ಬಂಧಿತ ಸುಹೇಲ್ ಕೇವಲ 15 ದಿನಗಳ ಹಿಂದೆಯಷ್ಟೇ ಹರಿಹರ ನಗರದ ಹೊರವಲಯದ ಫ್ಯಾಕ್ಟರಿಯೊಂದರಲ್ಲಿ ಪೇಂಟಿಂಗ್ ಕೆಲಸಕ್ಕಾಗಿ ಸೇರಿಕೊಂಡಿದ್ದ. ಕಾರ್ಮಿಕನ ಸೋಗಿನಲ್ಲಿ ತಂಗಿದ್ದುಕೊಂಡು ಈತ ದೇಶ ವಿರೋಧಿ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಂಕಿತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಹರಿಹರ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ, ಮುಂದಿನ ಉನ್ನತ ಮಟ್ಟದ ತನಿಖೆಗಾಗಿ ತುಮಕೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಉಗ್ರರ ಜಾಲದ ಹಿನ್ನೆಲೆಯ ಕುರಿತು ತನಿಖೆ ತೀವ್ರಗೊಂಡಿದೆ.


