ಬೆಳ್ತಂಗಡಿ, ಡಿ. 18 : ತಾಲೂಕಿನ ಬಂದಾರು – ಕೊಕ್ಕಡ ಸಂಪರ್ಕಿಸುವ ಮೈಪಾಲ ಎಂಬಲ್ಲಿ ರೂ.72 ಕೋಟಿ ಅನುದಾನದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಭಾಗಶ: ಸಂಪೂರ್ಣಗೊಂಡಿದ್ದು, ಪರೀಕ್ಷಾರ್ಥವಾಗಿ ಕಿಂಡಿ ಅಣೆಕಟ್ಟಿನಲ್ಲಿ ನೀರು ನಿಲ್ಲಿಸಲಾಯಿತು. ಇದರ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಶಾಸಕ ಹರೀಶ್ ಪೂಂಜಾರವರ ವಿಶೇಷ ಮುತುವರ್ಜಿಯಲ್ಲಿ ಮೈಪಾಲ ಎಂಬಲ್ಲಿ ಸೇತುವೆ ನಿರ್ಮಾಣಗೊಂಡಿದ್ದು ಎರಡು ಊರುಗಳ ಸಂಪರ್ಕಕ್ಕೆ ಇದೊಂದು ಪ್ರಮುಖ ಸೇತುವೆಯಾಗಿದೆ. ಬಂದಾರು – ಕೊಕ್ಕಡ ಸಂಪರ್ಕಿಸುವ ಮೈಪಾಲ ಎಂಬಲ್ಲಿ ಸೇತುವೆ ರಚನೆಯಾಗಬೇಕೆಂಬುದು ಚುನಾವಣೆಯ ಪೂರ್ವಕಾಲದಲ್ಲೇ ಪ್ರಚಾರದ ಸಂದರ್ಭದಲ್ಲಿ ಆ ಭಾಗದ ಗ್ರಾಮಸ್ಥರ ವಿಶೇಷ ಮನವಿ. ಅವೈಜ್ಞಾನಿಕ ಹೋಬಳಿ ಕೇಂದ್ರದ ರಚನೆಯಿಂದಾಗಿ ಹೋಬಳಿ ಕೇಂದ್ರಕ್ಕೆ ತಲುಪುವಲ್ಲಿ ಸುಮಾರು 35 ಕಿ.ಮೀ ಪ್ರಯಾಣಿಸಬೇಕಾಗಿತ್ತು. ಇದರಿಂದಾಗಿ ಆ ಭಾಗದ ಗ್ರಾಮಸ್ಥರು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದ್ದರು. ಶಾಸಕರು ಅಂದಿನ ಸಣ್ಣನೀರಾವರಿ ಇಲಾಖಾ ಸಚಿವರಾದ ಮಾಧುಸ್ವಾಮಿ ಅವರನ್ನು ತಾಲೂಕಿಗೆ ಆಹ್ವಾನಿಸಿ ಅವರಿಗೆ ಆ ಭಾಗದ ಗ್ರಾಮಸ್ಥರ ಸಮ್ಮುಖದಲ್ಲಿ ಮನವಿಯನ್ನು ನೀಡಿ ಪರಿಹಾರ ಮಾರ್ಗೋಪಾಯವನ್ನು ನೀಡುವಂತೆ ಕೋರಿದ ಫಲವಾಗಿ ರೂ.72 ಕೋಟಿ ಅನುದಾನವನ್ನು ಬಂದಾರು ಗ್ರಾಮದ ಮೈಪಾಲ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಂಜೂರುಗೊಳಿಸಿದರು. ಇಂದು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದೆ.


