ರಾಯ್‌ಪುರ್, ಜ. 01 : ದೇಶದಲ್ಲಿ ಹೆಚ್ಚುತ್ತಿರುವ ಭಾಷಾವಾರು ಕಿತ್ತಾಟಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಭಾಷೆಗಳು ಸಂವಹನ ಮಾಧ್ಯಮವಾಗಿದ್ದು, ಎಲ್ಲ ಭಾಷೆಯನ್ನು ಗೌರವಿಸುವ ಮೂಲಕ ಭಾಷಾ ಹಗೆತನವನ್ನು ತೊರೆಯಬೇಕು” ಎಂದು ಸಲಹೆ ನೀಡಿದ್ದಾರೆ. ಛತ್ತೀಸ್‌ಗಢ ರಾಜಧಾನಿ ರಾಯಪುರ್‌ನಲ್ಲಿ ಮಾತನಾಡಿದ ಮೋಹನ್ ಭಾಗವತ್, “ನಾವು ಯುರೋಪಿಯನ್ನರಲ್ಲ, ನಾವು ಮಧ್ಯಪ್ರಾಚ್ಯದವರಲ್ಲ, ನಾವು ಚೀನಾ ಅಥವಾ ಜಪಾನ್‌ನವರಲ್ಲ. ನಾವು ಭಾರತೀಯರಾಗಿದ್ದು, ಭಾರತ ಹಲವು ಭಾಷೆಗಳ ತವರೂರಾಗಿದೆ. ಇಲ್ಲಿನ ಭಾಷಾ ವೈವಿಧ್ಯತೆ ಜಗತ್ತಿನ ಬೇರೆಲ್ಲೂ ಕಾಣಸಿಗುವುದಿಲ್ಲ. ಭಾಷೆಗಳು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ” ಎಂದರು.
“ನಾವು ಮನೆಯಲ್ಲಿ ನಮ್ಮ ಮಾತೃಭಾಷೆಯಲ್ಲಿ ಮಾತನಾಡಬೇಕು. ಆದರೆ ವ್ಯಕ್ತಿಯೊಬ್ಬ ಬೇರೊಂದು ರಾಜ್ಯಕ್ಕೆ ವಲಸೆ ಹೋದರೆ, ಆ ರಾಜ್ಯದ ಭಾಷೆಯನ್ನು ಕಲಿಯಬೇಕು. ಏಕೆಂದರೆ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿದ್ದು, ಅವೆಲ್ಲವೂ ಸಮಾನ ಪ್ರಾತಿನಿಧ್ಯ ಹೊಂದಿವೆ” ಎಂದು ಆರ್ಎಸ್ಎಸ್ ಮುಖ್ಯಸ್ಥರು ಸೂಚ್ಯವಾಗಿ ಹೇಳಿದರು. ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಚರ್ಚೆ ನಡೆಯುತ್ತಿರುವುದು ಇಲ್ಲಿ ಉಲ್ಲೇಖನೀಯ. “ಭಾರತದ ಎಲ್ಲಾ ಭಾಷೆಗಳ ಮೂಲ ಒಂದೇ ಆಗಿದೆ. ಅವುಗಳಲ್ಲಿ ಭಿನ್ನ ಶಬ್ಧಗಳಿವೆ, ಆದರೆ ಭಾವ ಒಂದೇ ಆಗಿದೆ. ಭಾರತೀಯ ಭಾಷೆಗಳು ಭಾರತವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ. ಇಂತಹ ಮಹಾನ್ ಇತಿಹಾಸವಿರುವ ಭಾಷೆಗಳನ್ನು ನಾವು ನಮ್ಮ ಸ್ವಾರ್ಥಕ್ಕಾಗಿ ವಿರೋಧಿಸುವುದಾಗಲಿ ಅಥವಾ ಭಾಷೆ ಭಾಷೆಗಳ ನಡುವೆ ಕಿಚ್ಚು ಹಚ್ಚುವುದಾಗಲಿ ಮಾಡುವುದು ಸರಿಯಲ್ಲ” ಎಂದು ಮೋಹನ್ ಭಾಗವತ್ ಖಡಕ್ ಆಗಿ ಹೇಳಿದರು.
ದೇಶದ ಯುವಜನತೆ ಭಾರತೀಯ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಎಚ್ಚರಿಸಿದ ಮೋಹನ್ ಭಾಗವತ್, “ನಮಗೆ ಭಾಷೆ ಹೇಗೆ ಮುಖ್ಯವೋ ನಮ್ಮ ಸಂಸ್ಕೃತಿಯ ಉಳಿವೂ ಕೂಡ ಅಷ್ಟೇ ಮುಖ್ಯ. ಯುವಕರು ದಿನನಿತ್ಯ ಭಾರತೀಯ ಉಡುಗೆ ತೊಡುವುದು ಸಾಧ್ಯವಿಲ್ಲವಾದರೂ, ಹಬ್ಬದ ದಿನದಲ್ಲಾದರೂ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉಡುಗೆ ತೊಡಬೇಕು” ಎಂದು ಸಲಹೆ ನೀಡಿದರು. “ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಬೇಕು. ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡಿ, ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಬೇಕು. ಹಾಗೆಂದ ಮಾತ್ರಕ್ಕೆ ವಿದೇಶದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲೇಬಾರದು ಎಂದರ್ಥವಲ್ಲ. ದೇಶೀಯ ಉದ್ಯಮಕ್ಕೆ ಅನುಕೂಲವಾಗುವ ರೀತಿಯಲ್ಲಿ ನಾವು ವ್ಯಾಪಾರ ನೀತಿಗಳನ್ನು ರೂಪಿಸಬೇಕು” ಎಂದು ಮೋಹನ್ ಭಾಗವತ್ ಹೇಳಿದರು.
“ವಿನೋಭಾ ಬಾವೆ ಹೇಳಿದಂತೆ ಸ್ವದೇಶಿ ಎಂದರೆ ಸ್ವಾವಲಂಬನೆ ಮತ್ತು ಅಹಿಂಸೆ. ಹೀಗಾಗಿ ನಾವು ಸ್ವಾವಲಂಬಿಗಳಾಗುವತ್ತ ಹೆಚ್ಚಿನ ಗಮನಹರಿಸಬೇಕು. ನಾವೂ ಬೆಳೆದು ಇತರರನ್ನೂ ಬೆಳೆಸುವ ಉದಾರ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳಬೇಕು” ಎಂದು ಆರ್ಎಸ್ಎಸ್ ಮುಖ್ಯಸ್ಥರು ನುಡಿದರು. ಭಾಷಾವಾರು ಬಡಿದಾಟದ ಇಂದಿನ ಪರಿಸ್ಥಿತಿಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಎಲ್ಲ ಭಾಷೆಗಳನ್ನು ಗೌರವಿಸುವ ಸಂದೇಶ ಮತ್ತು ಎಲ್ಲ ಭಾಷೆಗಳನ್ನು ಕಲಿಯುವ ಸಂದೇಶ ಗಮನ ಸೆಳೆದಿದೆ ಎಂದು ಹೇಳಬಹುದು. ಮೋಹನ್ ಭಾಗವತ್ ಅವರು ಇಂದು (ಜ.1-ಗುರುವಾರ) ರಾಯಪುರ್‌ದಲ್ಲಿರುವ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ್ದರು.

