ಭೋಪಾಲ್ : ಹಿಂದೂ ರಾಷ್ಟ್ರದ ಸಂಪೂರ್ಣ ವೈಭವದ ಏಕೈಕ ಉದ್ದೇಶದಿಂದ ಆರ್‌ಎಸ್‌ಎಸ್‌ ಕೆಲಸ ಮಾಡುತ್ತದೆ – ಮೋಹನ್‌ ಭಾಗವತ್

ಭೋಪಾಲ್, ಜ. 03 : ಸಂಘವು ಬಿಜೆಪಿ ಅಥವಾ ವಿಶ್ವ ಹಿಂದೂ ಪರಿಷತ್‌ (ವಿಹೆಚ್‌ಪಿ) ಹಾಗೂ ವಿದ್ಯಾ ಭಾರತಿಯಂತಹ ಸಂಸ್ಥೆಗಳ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ. ಈ ಎಲ್ಲ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸರಸಂಘಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆ.

Advertisement

ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಆರ್‌ಎಸ್‌ಎಸ್‌ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಮೋಹನ್‌ ಭಾಗವತ್‌ ಅವರ ಈ ಹೇಳಿಕೆಯು ಭಾರೀ ಮಹತ್ವ ಪಡೆದುಕೊಂಡಿದೆ. “ಬಿಜೆಪಿ ಅಥವಾ ವಿಎಚ್‌ಪಿ ಮೂಲಕ ಆರ್‌ಎಸ್‌ಎಸ್ ಸಂಘಟನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಡಿ. ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ ಮತ್ತು ಸಂಘವು ಅವುಗಳ ಮೇಲೆ ಯಾವ ನಿಯಂತ್ರಣವನ್ನೂ ಹೊಂದಿಲ್ಲ. ಅಂಗಸಂಸ್ಥೆಗಳ ಮೂಲಕ ಆರ್‌ಎಸ್‌ಎಸ್ ಅರ್ಥಮಾಡಿಕೊಳ್ಳುವ ಪ್ರಯತ್ನವೇ ಮೂಲಭೂತವಾಗಿ ತಪ್ಪಾಗಿದೆ. ಸಂಘ ಕೇವಲ ಸ್ವಯಂಸೇವಕರನ್ನು ತಯಾರು ಮಾಡುತ್ತದೆಯೇ ಹೊರತು, ಅವರನ್ನು ರಿಮೋಟ್‌ ಕಂಟ್ರೋಲ್‌ ಮೂಲಕ ನಿಯಂತ್ರಿಸುವುದಿಲ್ಲ” ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಆರ್‌ಎಸ್‌ಎಸ್‌ ತನ್ನ ಸ್ವಯಂಸೇವಕರಲ್ಲಿ ಭಾರತದ ಪರಮ ವೈಭವಕ್ಕಾಗಿ ಕೆಲಸ ಮಾಡಲು ಬೇಕಾದ ಮೌಲ್ಯಗಳು, ಆಲೋಚನೆಗಳು ಮತ್ತು ಗುರಿಗಳನ್ನು ಬಿತ್ತುತ್ತದೆ. ಈ ಸ್ವಯಂಸೇವಕರು ಮುಂದೆ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ, ತಮ್ಮ ಅಂತಿಮ ಗುರಿಯನ್ನು ತಲುಪಲು ಶ್ರಮಿಸುತ್ತಾರೆ. ಹೀಗೆಂದ ಮಾತ್ರಕ್ಕೆ ಸಂಘವು ಸದಾಕಾಲ ಅಂತಹ ಸ್ವಯಂಸೇವಕರನ್ನು ನಿಯಂತ್ರಿಸುತ್ತದೆ ಎಂದರ್ಥವಲ್ಲ. ಸಂಘ ರಾಜಕೀಯದಲ್ಲಿ ತಲೆಹಾಕುವುದಿಲ್ಲ ಎಂದು ನೂರು ಬಾರಿ ಸ್ಪಷ್ಟಪಡಿಸಿದೆ. ಬಿಜೆಪಿ, ವಿಹೆಚ್‌ಪಿ, ವಿದ್ಯಾ ಭಾರತಿ ಸಂಸ್ಥೆಗಳು ನಮ್ಮ ಸ್ವಯಂಸೇವಕರಿಂದ ನಡೆಸಲ್ಪಡುತ್ತವೆ ಎಂಬುದು ನಿಜ. ಆದರೆ ಅವು ತಮ್ಮದೇ ಆದ ಸಂವಿಧಾನದ ಪ್ರಕಾರ ಸ್ವತಂತ್ರ ಗುರುತಿನೊಂದಿಗೆ ಕಾರ್ಯನಿರ್ವಹಿಸುತ್ತವೆ. ಆದರೆ ಭಾರತದ ಸಂಪೂರ್ಣ ವೈಭವಕ್ಕಾಗಿ ಕೆಲಸ ಮಾಡುವ ನಮ್ಮ ದೃಷ್ಟಿಕೋನವು ಸಾಮಾನ್ಯವಾಗಿದೆ. ಅದನ್ನೇ ನಿಯಂತ್ರಣ ಎಂದು ಕರೆಯುವುದು ತಪ್ಪಾಗುತ್ತದೆ. ಈ ಸಂಸ್ಥೆಗಳು ತಮ್ಮದೇ ಆದ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಮತ್ತು ವಿಭಿನ್ನ ಹಿನ್ನೆಲೆಯ ಜನರೊಂದಿಗೆ ಕೆಲಸ ಮಾಡುತ್ತವೆ ಎಂದು ಮೋಹನ್‌ ಭಾಗವತ್‌ ಸೂಚ್ಯವಾಗಿ ಹೇಳಿದರು.

ಆರ್‌ಎಸ್‌ಎಸ್‌ ಸೈದ್ಧಾಂತಿಕ ವಿರೋಧಿಗಳಿಂದ ನಡೆದ ಅಪಪ್ರಚಾರದಿಂದಾಗಿ, ಸಂಘಟನೆಯು ಬಹಳ ಹಿಂದಿನಿಂದಲೂ ತಪ್ಪು ಮಾಹಿತಿ ಮತ್ತು ತಪ್ಪು ತಿಳುವಳಿಕೆಗೆ ಒಳಗಾಗಿದೆ ಎಂದ ಮೋಹನ್‌ ಭಾಗವತ್‌, ಸಂಘದ ಸಾಂಸ್ಕೃತಿಕ ಚಟುವಟಿಕೆಗಳಿಗೂ ಬಿಜೆಪಿಯ ರಾಜಕೀಯ ಚಟುವಟಿಕೆಗಳಿಗೂ ಇರುವ ವ್ಯತ್ಯಾಸವನ್ನು ಗುರುತಿಸುವಂತೆ ಜನತೆಗೆ ಕರೆ ನೀಡಿದರು. ಆರ್‌ಎಸ್‌ಎಸ್‌ಗೆ ರಾಜಕೀಯದಲ್ಲಿ ಯಾವುದೇ ರುಚಿ ಇಲ್ಲ ಎಂದೂ ಸರಸಂಘಚಾಲಕ ಈ ವೇಳೆ ಸ್ಪಷ್ಟವಾದ ಧ್ವನಿಯಲ್ಲಿ ಹೇಳಿದರು. ಆರ್‌ಎಸ್‌ಎಸ್ ಮತ್ತು ವಿಶ್ವದ ಯಾವುದೇ ಇತರ ಸಂಘಟನೆಯ ನಡುವೆ ಯಾವುದೇ ಸಮಾನಾಂತರಗಳನ್ನು ಚಿತ್ರಿಸಲು ಸಾಧ್ಯವಿಲ್ಲ. ಅದರ ಕಾರ್ಯನಿರ್ವಹಣೆ ವಿಶಿಷ್ಟವಾಗಿದೆ. ಆದಾಗ್ಯೂ, ಅದು ತಥಾಗತ ಬುದ್ಧ (ಗೌತಮ ಬುದ್ಧ)ನಿಂದ ಸ್ಫೂರ್ತಿ ಪಡೆಯುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಭಾರತದ ಆಧ್ಯಾತ್ಮಿಕ ಪರಂಪೆಯನ್ನು ಮುಂದುವರೆಸುವುದೇ ಸಂಘದ ಪರಮಧ್ಯೇಯ ಎಂದು ನುಡಿದರು.

ಆರ್‌ಎಸ್‌ಎಸ್‌ ಸಂಘಟನೆಯನ್ನು ಅರೆಸೈನಿಕ ಪಡೆ ಎಂದು ಲೇಬಲ್ ಮಾಡುವ ಪ್ರಯತ್ನಗಳನ್ನು ಟೀಕಿಸಿದ ಮೋಹನ್‌ ಭಾಗವತ್‌, “ನಾವು ಲಾಠಿ ಹಿಡಿದು ಪಥಸಂಚಲನ ನಡೆಸುವುದರಿಂದ ಮತ್ತು ಪ್ರತ್ಯೇಕವಾದ ಸಮವಸ್ತ್ರ ಹೊಂದಿರುವುದರಿಂದ, ಜನರಲ್ಲಿ ಇಂತಹ ಸುಳ್ಳು ನಿರೂಪಣೆ ಬಿತ್ತಲು ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಘ ಎಂದಿಗೂ ಒಂದು ಅರೆಸೈನಿಕ ಪಡೆಯಾಗಿ ಕೆಲಸ ಮಾಡುವುದಿಲ್ಲ. ಸ್ವಯಂಸೇವಕರು ತಮ್ಮ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕೆಂಬ ಉದ್ದೇಶವನ್ನು ಮಾತ್ರ ಹೊಂದಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಸಂಘ ಅರ್ಥವಾಗಬೇಕಾದರೆ ಶಾಖೆಗೆ ಬನ್ನಿ:

ಆರ್‌ಎಸ್‌ಎಸ್ ಬಗ್ಗೆ ತಪ್ಪು ಕಲ್ಪನೆಗಳನ್ನು ಬೆಂಬಲಿಗರು ಮತ್ತು ವಿಮರ್ಶಕರು ಇಬ್ಬರೂ ಹರಡಿದ್ದಾರೆ ಎಂದು ಹೇಳಿದ ಮೋಹನ್‌ ಭಾಗವತ್‌, ಆರ್‌ಎಸ್‌ಎಸ್ ಎಂದರೆ ಏನೆಂಬುದನ್ನು ಅರ್ಥಮಾಡಿಕೊಳ್ಳಲು ನೀವು ವಿಕಿಪೀಡಿಯಾ ಮೊರೆಹೋಗದೇ, ಶಾಖೆಗೆ ನೇರವಾಗಿ ಭೇಟಿ ನೀಡಬೇಕು ಆರ್‌ಎಸ್‌ಎಸ್ ಪ್ರಜ್ಞಾಪೂರ್ವಕವಾಗಿ ಒತ್ತಡದ ಗುಂಪಾಗಿ ಕಾರ್ಯನಿರ್ವಹಿಸದಿರಲು ಆಯ್ಕೆ ಮಾಡಿಕೊಂಡಿದೆ. ಹಿಂದೂ ಸಮಾಜವನ್ನು ಸಂಘಟಿಸುವುದನ್ನು ಮಾತ್ರ ತನ್ನ ಉದ್ಧೇಶ ಮಾಡಿಕೊಂಡಿದೆ ಎಂಬುದನ್ನು ಅರಿಯಬೇಕು ಎಂದು ಜನರಲ್ಲಿ ಮನವಿ ಮಾಡಿದರು. “100 ವರ್ಷಗಳ ತನ್ನ ಪ್ರಯಾಣದಲ್ಲಿ ಆರ್‌ಎಸ್‌ಎಸ್ ಜಗತ್ತಿನಲ್ಲಿ ಯಾವುದೇ ಸಂಘಟನೆ ಎದುರಿಸದ ವಿರೋಧ ಮತ್ತು ತೊಂದರೆಗಳನ್ನು ಎದುರಿಸಿದೆ. ಸಂಘವನ್ನು ಫ್ಯಾಸಿಸ್ಟ್‌ ಶಕ್ತಿಗಳೊಂದಿಗೆ ಜೋಡಿಸುವ ಹುನ್ನಾರ ಈಗಲೂ ನಡೆಯುತ್ತಿದೆ. ಸಂಘದ ಸಿದ್ಧಾಂತ ಹಿಂದೂ ರಾಷ್ಟ್ರ ನಿರ್ಮಾಣವೇ ಹೊರತು ಫ್ಯಾಸಿಸ್ಟ್‌ ರಾಷ್ಟ್ರ ನಿರ್ಮಾಣವಲ್ಲ. ನಮ್ಮ ಹಿಂದೂ ರಾಷ್ಟ್ರದ ಸಂಪೂರ್ಣ ವೈಭವದ ಏಕೈಕ ಉದ್ದೇಶದಿಂದ ಮಾತ್ರ ನಾವು ಕೆಲಸ ಮಾಡುತ್ತೇವೆ” ಎಂದು ಮೋಹನ್‌ ಭಾಗವತ್‌ ಹೇಳಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.