ರಾಜಸ್ಥಾನ, ಜ. 05 : ಭಾರತೀಯ ಸೇನೆ ಈಗಾಗಲೇ ತನ್ನ ಶಕ್ತಿಯಲ್ಲಿ ಮತ್ತಷ್ಟು ಶಕ್ತಿಯನ್ನು ತುಂಬಿಕೊಂಡು, ವೈರಿ ಪಡೆಗಳ ಎದೆ ನಡುಗಿಸುತ್ತಿದೆ. ಇದೀಗ, ಬದಲಾಗುತ್ತಿರುವ ಜಾಗತಿಕ ಯುದ್ಧದ ಸ್ವರೂಪಕ್ಕೆ ತಕ್ಕಂತೆ ಭಾರತೀಯ ಸೇನೆಯು ತನ್ನ ಶಕ್ತಿಯನ್ನು ಮರುಸಂಘಟಿಸುತ್ತಿದೆ. ಸೇನೆಗೆ ಭೀಮ ಬಲವಾಗಿ ಇದೀಗ ‘ಭೈರವ’ ಎಂಬ ಅತ್ಯಾಧುನಿಕ ವಿಶೇಷ ಪಡೆಯನ್ನು ಸಜ್ಜುಗೊಳಿಸಿದೆ. ಆಧುನಿಕ ಯುದ್ಧದ ಸವಾಲುಗಳನ್ನು ಎದುರಿಸಲು ಸೇನೆಯು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಡ್ರೋನ್ ಆಪರೇಟರ್‌ಗಳ ಬೃಹತ್ ತಂಡವನ್ನು ನಿರ್ಮಿಸುವ ಮೂಲಕ ಐತಿಹಾಸಿಕ ಬದಲಾವಣೆಗೆ ನಾಂದಿ ಹಾಡಿದೆ. ಈ ಮೂಲಕ ಭಾರತೀಯ ಸೇನೆ ಮತ್ತಷ್ಟು ಶಕ್ತಿಶಾಲಿ ಆಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ವೈರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದಂತಿದೆ.
ಭಾರತೀಯ ಸೇನೆಯ ಪದಾತಿ ದಳದ ರೆಜಿಮೆಂಟ್‌ಗಳಿಂದ ಆಯ್ದ ಯೋಧರನ್ನು “ಭೈರವ” ವಿಶೇಷ ಪಡೆಗೆ ಸೇರಿಸಿಕೊಳ್ಳಲಾಗಿದೆ. ಈ ಪಡೆಯ ಪ್ರತಿಯೊಬ್ಬ ಸೈನಿಕನೂ ಕೂಡಾ ಡ್ರೋನ್‌ಗಳನ್ನು ನಿರ್ವಹಿಸುವಲ್ಲಿ ನಿಪುಣನಾಗಿದ್ದು, ಶತ್ರು ರಾಷ್ಟ್ರದ ಒಳಗಿನ ನೆಲೆಗಳನ್ನು ಗುರಿಯಾಗಿಸಲು ಮತ್ತು ಕಾರ್ಯಾಚರಣೆ ನಡೆಸಲು ಇವರಿಗೆ ವಿಶೇಷ ತರಬೇತಿ ನೀಡಲಾಗಿದೆ.
ಭಾರತೀಯ ಸೇನೆಯು ಹೊಸದಾಗಿ ರೂಪಿಸಿರುವ ‘ಭೈರವ’ ಬೆಟಾಲಿಯನ್, ಶತ್ರು ಪ್ರದೇಶದ ಒಳಗೆ ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ದಾಳಿ ನಡೆಸುವ ಉನ್ನತ ಡ್ರೋನ್ ಆಧಾರಿತ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ದೇಶಾದ್ಯಂತ ಇಂತಹ 15 ಬೆಟಾಲಿಯನ್‌ಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು 25ಕ್ಕೆ ಏರಿಸುವ ಗುರಿಯನ್ನು ಸೇನೆ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಪಡೆಯು, ಪ್ಯಾರಾ ಸ್ಪೆಷಲ್ ಫೋರ್ಸಸ್ ಮತ್ತು ಸಾಮಾನ್ಯ ಪದಾತಿ ದಳದ ನಡುವಿನ ಕಾರ್ಯಾಚರಣೆಯ ಅಂತರವನ್ನು ಕಡಿಮೆ ಮಾಡುವ ಸೇತುವೆಯಾಗಿ ಮಹತ್ವದ ಪಾತ್ರ ವಹಿಸಲಿದೆ.

