ಬಿಹಾರ : ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಭವಿಷ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ, ಮತ ಎಣಿಕೆ ಕಾರ್ಯ ಚಾಲ್ತಿಯಲ್ಲಿದೆ. ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳ ಮಹಾಘಟಬಂಧನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ಎರಡೂ ಮೈತ್ರಿಕೂಟಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎಗೆ ಸ್ಪಷ್ಟ ಬಹುಮತವನ್ನು ಭವಿಷ್ಯ ನುಡಿದಿದ್ದು, ಆರಂಭಿಕ ಟ್ರೆಂಡ್‌ಗಳೂ ಇದನ್ನೇ ಹೇಳುತ್ತಿವೆ.
ಮತ ಎಣಿಕೆ ಚಾಲ್ತಿಯಲ್ಲಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ತವಕದಲ್ಲಿದ್ದರೆ, ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಪ್ರಬಲ ಪೈಪೋಟಿ ನೀಡಿದೆ. ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ‘ಜನ್ ಸುರಾಜ್’ ಪಕ್ಷದ ಪ್ರವೇಶವು ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. 11 ಗಂಟೆಯ ಸುಮಾರಿಗೆ ಎನ್‌ಡಿಎ ಬರೋಬ್ಬರಿ 195 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮಹಾಘಟಬಂಧನ್ ಕೇವಲ 45 ಸ್ಥಾನಗಳಲ್ಲಿ ಮುಂದಿದೆ. ಜೆಡಿಯು 84 ಹಾಗೂ ಬಿಜೆಪಿ 82 ಸ್ಥಾನಗಳಲ್ಲಿ ಮುಂದಿವೆ. ಆರ್‌ಜೆಡಿ 32 ಹಾಗೂ ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಹೀನಾಯ ಸೋಲಿನತ್ತ ಮುಖ ಮಾಡಿದೆ.

