ಕುಂದಾಪುರ : ಕರಾವಳಿ ಭಾಗದಲ್ಲಿ ತಾಪಮಾನ ಏರಿಕೆ – ಮತ್ಸ್ಯಕ್ಷಾಮದ ಭೀತಿ ! ಅವಧಿಗೆ ಮುನ್ನವೇ ಲಂಗರು ಹಾಕುತ್ತಿವೆ ಮೀನುಗಾರಿಕಾ ಬೋಟ್ ಗಳು

ಕುಂದಾಪುರ, ಏ. 18 : ಕರಾವಳಿ ಭಾಗದಲ್ಲಿ ತಾಪಮಾನ ಏರಿಕೆ, ಸಮುದ್ರದ ನೀರಿನ ಉಷ್ಣಾಂಶ ಹೆಚ್ಚಳ, ಮತ್ಸ್ಯಕ್ಷಾಮ, ಇಂಧನ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಒತ್ತಡದಿಂದ ಮೀನುಗಾರಿಕಾ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

Advertisement

ಮುಂಗಾರು ಮೀನುಗಾರಿಕೆ ನಿಷೇಧ ಘೋಷಣೆಗೆ ಇನ್ನೂ ಸಮಯ ಇರುವುದಾದರೂ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂದರುಗಳಲ್ಲಿಈಗಾಗಲೇ ಬಹುತೇಕ ಬೋಟ್‌ಗಳು ಲಂಗರು ಹಾಕಲು ಆರಂಭಿಸಿವೆ. ಮಂಗಳೂರು, ಮಲ್ಪೆ, ಗಂಗೊಳ್ಳಿ, ಬೈಂದೂರು ಸೇರಿದಂತೆ ಪ್ರಮುಖ ಬಂದರುಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳು ಗಣನೀಯವಾಗಿ ಕುಂಠಿತಗೊಂಡಿವೆ. ಸಮುದ್ರಕ್ಕೆ ತೆರಳುವ ಬೋಟ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಪ್ರಸ್ತುತ ಶೇ.15 ರಷ್ಟು ಬೋಟ್‌ಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. ಉಳಿದ ಶೇ.85 ರಷ್ಟು ಬೋಟ್‌ಗಳು ದಡ ಸೇರಿವೆ ಎಂದು ಮೀನುಗಾರರು ತಿಳಿಸಿದ್ದಾರೆ.

ಸಮುದ್ರ ತಾಪಮಾನ ಪರಿಣಾಮ:

ಭೂಮಿಯ ತಾಪಮಾನ ಏರಿಕೆಯ ಪರಿಣಾಮ ಸಮುದ್ರದ ನೀರಿನಲ್ಲೂ ಕಂಡುಬರುತ್ತಿದೆ. ನೀರಿನ ಉಷ್ಣಾಂಶ ಹೆಚ್ಚಾದ ಕಾರಣ ಮೀನುಗಳು ಕರಾವಳಿ ಭಾಗ ಬಿಟ್ಟು ಆಳ ಸಮುದ್ರ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ. ಇದರಿಂದ ಬಲೆ ಬೀಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಹಲವು ದಿನಗಳ ಕಾಲ ಸಮುದ್ರದಲ್ಲಿ ತಂಗಿ ಮೀನುಗಾರಿಕೆ ನಡೆಸಿದರೂ ವೆಚ್ಚಕ್ಕೆ ತಕ್ಕ ಆದಾಯ ಲಭಿಸುತ್ತಿಲ್ಲ ಎನ್ನುವುದು ಮೀನುಗಾರರ ಅಳಲು.

ಆಳ ಸಮುದ್ರ ಮೀನುಗಾರಿಕೆಗೆ ಪ್ರತಿ ಬಾರಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಡೀಸೆಲ್, ಐಸ್‌, ಆಹಾರ ಸಾಮಗ್ರಿ, ಕಾರ್ಮಿಕರ ವೇತನ ಸೇರಿದಂತೆ ಅನೇಕ ಖರ್ಚುಗಳನ್ನು ಭರಿಸಬೇಕಾಗುತ್ತದೆ. ಆದರೆ ಸಮರ್ಪಕ ಮೀನು ಸಿಗದ ಕಾರಣ ಸಾಲದ ಹೊರೆ ಹೆಚ್ಚುತ್ತಿದೆ. ಕೆಲವರು ಬೋಟ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಪರ್ಯಾಯ ಉದ್ಯೋಗಗಳತ್ತ ಮುಖ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಇಂಧನ ಕೊರತೆಯ ಹೊರೆ:

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಸಂಘರ್ಷಗಳ ಪರಿಣಾಮವಾಗಿ ಇಂಧನ ಸರಬರಾಜಿನ ಮೇಲೂ ಪರಿಣಾಮ ಬಿದ್ದಿದೆ. ಮೀನುಗಾರಿಕೆಗೆ ಮೀಸಲಾದ ಪೆಟ್ರೋಲ್‌ ಬಂಕ್‌ಗಳಲ್ಲಿ ಡೀಸೆಲ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಡೀಸೆಲ್‌ ಲಭ್ಯವಿದ್ದರೂ ಬೆಲೆ ಏರಿಕೆ ಹೆಚ್ಚುವರಿ ಹೊರೆ ತಂದಿದೆ. ಕರಾವಳಿಯ ಆರ್ಥಿಕ ಚಟುವಟಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಮೀನುಗಾರಿಕಾ ವಲಯ ಎದುರಿಸುತ್ತಿರುವ ಈ ಸಂಕಷ್ಟಕ್ಕೆ ತ್ವರಿತ ಪರಿಹಾರ ಕ್ರಮ ಅಗತ್ಯವಾಗಿದೆ. ಇಲ್ಲವಾದರೆ ಸಾವಿರಾರು ಕುಟುಂಬಗಳ ಬದುಕಿನ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಮೀನಿನ ಲಭ್ಯತೆ ತುಂಬಾ ಕಡಿಮೆಯಾಗಿದೆ. ಡೀಸೆಲ್‌ ಪೂರೈಕೆಯಲ್ಲೂವ್ಯತ್ಯಯ ಉಂಟಾಗಿದೆ. ತಾಪಮಾನ ಏರಿಕೆ ಹಾಗೂ ಮತ್ಸ್ಯಕ್ಷಾಮ ಎರಡೂ ವಲಯಕ್ಕೆ ದೊಡ್ಡ ಹೊಡೆತ ನೀಡಿವೆ. ಆದ್ದರಿಂದಲೇ ಬಹುತೇಕ ಬೋಟ್‌ಗಳು ಮುಂಗಾರು ನಿಷೇಧಕ್ಕೂ ಮುನ್ನವೇ ದಡ ಸೇರಿವೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕರಾವಳಿಗೆ ಅಪ್ಪಳಿಸಿದ ಉಷ್ಣ ಅಲೆ – ಮನೆಯಿಂದ ಹೊರ ಬರುವ ಮುನ್ನ ಎಚ್ಚರ ! ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ರಾಹುಲ್ ಗಾಂಧಿ ಪೌರತ್ವಕ್ಕೆ ಕಂಟಕ ! ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ…

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

⚠️ Contents are protected on this website.