ಕಾರ್ಕಳ : ತುಳುನಾಡು ದೈವರಾಧನೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿರುವ ನಾಡು. ಇಲ್ಲಿ ನೂರಾರು ವೀರ ಪುರುಷರು ಮಾಯ ರೂಪವನ್ನು ಸೇರಿ, ಭಕ್ತರನ್ನು ಕಾಯುತ್ತಿರುವ ಹಲವಾರು ಕಥೆಗಳಿವೆ. ಹಾಗೆಯೇ ಕಾರಣಿಕದ ಕೋಟಿ ಚೆನ್ನಯರ ಗರಡಿಗಳು ಕೂಡಾ ತುಳುನಾಡಿನಾದ್ಯಂತ ಹಲವಾರಿದೆ. ಮೂರೂರು (ಹಿರ್ಗಾನ) ಗ್ರಾಮದ ನೆಲ್ಲಕಟ್ಟೆ ಎಂಬಲ್ಲಿರುವ ಬ್ರಹ್ಮಬೈದರ್ಕಳ ಗರಡಿ ಇಂದು ತುಳುನಾಡಿನಾದ್ಯಂತ ಹೆಸರುವಾಸಿಯಾಗಿರುವ ಕಾರಣಿಕ ಕ್ಷೇತ್ರವಾಗಿದೆ. ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯಕ್ಕೆ ಗರಡಿಯ ಆಡಳಿತ ಸಮಿತಿ ಮುಂದಾಗಿದೆ.

ತುಳುನಾಡಿನ ಅವಳಿ ವೀರ ಪುರುಷರು ಕೋಟಿ ಚೆನ್ನಯರು. ಸುಮಾರು 450 ವರುಷಗಳ ಹಿಂದೆ, ಪಾರ್ದನಗಳ ಉಲ್ಲೇಖದಂತೆ ಕಾಯ ಬಿಟ್ಟು ಮಾಯ ಸೇರಿದ ನಂತರ ಎಣ್ಣೂರು ತೆಂಕಣ ಆದಿಗರಡಿಯ ಸ್ಥಾಪನೆಗೆ ಪ್ರೇರಣೆಕೊಟ್ಟು, ಬಡಗಣ (ಬಡಕಾಯಿ) ಸೀಮೆಯ ಮೆಲಂಟೆಗುತ್ತಿಗೆ ಬಂದು, ಮಂಗಿಲಾರು ಮಿತ್ತಲಗುಡ್ಡೆ ಬ್ರಹ್ಮರ ಅಪ್ಪಣೆ ಪಡೆದು. ಹಾಡಿ ಮನೆಯ ಪರಿಸರದಲ್ಲಿ ಚಗಟೆ ಸೊಪ್ಪು (ತೊಜಂಕ್) ದಂಟು ನೆಟ್ಟು. ತಾವೇ ಆಯ ಮೂಲೆ ತೆಗೆದು ಸ್ಥಾಪನೆ ಮಾಡಿದ ಗರಡಿಯೇ ಹಾಡಿ ಬಡಗಣ ಮೂಲ ಗರಡಿ ಶ್ರೀ ಬ್ರಹ್ಮ ಬೈದರ್ಕಳ ಮಾಯಂದಾಲ ದೇವಿ ಸನ್ನಿಧಿ. ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಯಲ್ಲಿ ಮೂರೂರು (ಹಿರ್ಗಾನ) ಗ್ರಾಮದ ನೆಲ್ಲಕಟ್ಟೆ ಎಂಬಲ್ಲಿ ಪೂರ್ವಕ್ಕೆ ಒಂದೂವರೆ ಕಿಲೋಮೀಟರ್ ಸಾಗಿದರೆ ಸುವರ್ಣ ನದಿಯ ತಟದಲ್ಲಿನ ಪ್ರಕೃತಿ ರಮಣೀಯ ಹಸಿರು ಸಿರಿಯ ಬೆಡಗಿನ ಪ್ರದೇಶದಲ್ಲಿ ಈ ಕ್ಷೇತ್ರ ನೆಲೆಸಿದೆ. ಈ ಪಾವನ ಪುಣ್ಯ ಸನ್ನಿಧಿಯ ಒಳಭಾಗದಲ್ಲಿ ಪ್ರಧಾನ ಬ್ರಹ್ಮರ ಗುಡಿ. ಇಕ್ಕೆಡೆಗಳಲ್ಲಿ ಬೈದರ್ಕಳ ಮತ್ತು ಬಲ್ಲಾಳರ ಸಾನಿಧ್ಯ ಪ್ರತಿಷ್ಠಾಪಿಸಲ್ಪಟ್ಟಿದೆ. ಕ್ಷೇತ್ರದ ಆರಾಧ್ಯ ಶಕ್ತಿ ಸ್ವರೂಪಿಣಿ ಮಾಯಂದಮಾನಿಬಾಲೆಯು ಭವ್ಯ ಮೂರ್ತಿಸ್ವರೂಪದಲ್ಲಿ ನೆಲೆಯಾಗಿದ್ದಾರೆ. ದೇವಿಯ ಎಡಭಾಗದಲ್ಲಿ ಜುಮಾದಿ, ಬಂಟ. ಬಲಭಾಗದಲ್ಲಿ ಪೂರ್ವಕ್ಕೆ ಜೋಗಿ ಪುರುಷರು ನೆಲೆನಿಂತು ಭಕ್ತರನ್ನು ಹರಸುತ್ತಿದ್ದಾರೆ. ಗರಡಿಯ ಹೊರ ಪ್ರಾಂಗಣದಲ್ಲಿ ಶಿಲೆಯ ತುಳಸಿಕಟ್ಟೆ. ಅಂಗಣ ಪಿಲಿಚಂಡಿ ಪೀಠ ಮತ್ತು ಸುತ್ತು ಪೌಳಿಯ ಹೊರಾಂಗಣದ ಪಶ್ಚಿಮಕ್ಕೆ ಬ್ರಹ್ಮಸ್ಥಾನದಲ್ಲಿ ಪಂಚದೈವ ಸಾನಿಧ್ಯವಿದೆ. ಉತ್ತರಕ್ಕೆ ನೀಚ-ಬೊಬ್ಬರ್ಯ ಕಟ್ಟೆ ಇದೆ.
ಗರಡಿಯ ವೈಶಿಷ್ಟ್ಯತೆ :
ತುಳುನಾಡಿನ ಗರಡಿಗಳಲ್ಲಿ ಪತ್ತನಾಜೆಯಲ್ಲಿ ಮಳೆಗಾಲದ ಜಡಿಮಳೆಯ ಸಿಂಹ ಸಂಕ್ರಮಣದ ಪರ್ವದಿನ, ಕರಾವಳಿ ಭಾಗದಲ್ಲಿಯೇ ಪ್ರಪ್ರಥಮ ನೇಮೋತ್ಸವ ನಡೆಯುವುದೇ ಈ ಮೂಲ ಗರಡಿಯ ವಿಶೇಷತೆ, ವಾರ್ಷಿಕ ನೇಮೋತ್ಸವದ ತರುವಾಯ ಒಂದು ತಿಂಗಳ ಭಕ್ತರ ಸೇವೆಯ ಹೂವಿನ ಪೂಜೆ, ಸೋಣಾರತಿ ಪೂಜೆ, ನವರಾತ್ರಿಯ ಒಂಬತ್ತು ದಿನಗಳ ಮಧ್ಯಾಹ್ನ ಮತ್ತು ರಾತ್ರಿ ಪೂಜೆ, ಅನ್ನ ಸಂತರ್ಪಣೆ ಹಾಗೂ ಕಾರ್ತಿಕ ಮಾಸದ ವಿಶೇಷ ತುಳಸಿ ಪೂಜೆ. ಒಂದು ತಿಂಗಳ ಪರ್ಯಂತ ಭಕ್ತರ ಸೇವೆಯ ಕಾರ್ತಿಕ ಹೂವಿನ ಪೂಜೆ, ದೀಪರಾಧನೆ ವಿಜೃಂಭಣೆಯಿಂದ ನಡೆಯುವ ತುಳುನಾಡಿನ ಏಕೈಕ ಗರಡಿ. ಕರ್ಕಾಟಕ ಮಾಸ (ಆಟಿ ತಿಂಗಳು) ಹೊರತುಪಡಿಸಿ ಪ್ರತಿ ಮಂಗಳವಾರ, ಶುಕ್ರವಾರ ಪೂಜೆ ಮತ್ತು ಪ್ರತಿ ತಿಂಗಳು ಸಂಕ್ರಮಣ ಪೂಜೆ ಹಾಗೂ ಅನ್ನ ಸಂತರ್ಪಣೆಯೊಂದಿಗೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಭಕ್ತರ ಹರಕೆಯ ಲಕ್ಷ ಹೂವಿನ ಪೂಜೆ. ಹಗಲು ಪನಿಯಾರ ಸೇವೆಗಳು ನಡೆಯುವುದು ಈ ಗರಡಿಯ ವೈಶಿಷ್ಟ್ಯತೆ. ನಂಬಿದವರಿಗೆ ಇಂಬು ಕೊಡುವ ಗರಡಿಯ ಶಕ್ತಿಗಳು ಸಂತಾನ ಫಲ, ಮದುವೆ, ವಿದ್ಯಾಭ್ಯಾಸ, ಆರೋಗ್ಯ ಹಾಗೂ ಸಂಪತ್ತಿನ ಬೇಡಿಕೆಯ ಹರಕೆಗಳನ್ನು ಹೂವಿನ ಪೂಜೆಗಳನ್ನು ಭಕ್ತಾದಿಗಳಿಂದ ನಿರಂತರವಾಗಿ ಭಂಡಾರಕ್ಕೆ ಭರಿಸಿ, ಬೇಡಿ ಬಂದ ಭಕ್ತರನ್ನು ಶೀಘ್ರ ಫಲಗಳೊಂದಿಗೆ ಇಷ್ಟಾರ್ಥಗಳನ್ನು ಕರುಣಿಸುತ್ತಿದ್ದಾರೆ ಎಂಬುದು ಭಕ್ತರ ನಂಬಿಕೆ.

ಸುತ್ತು ಪೌಳಿ ನವೀಕರಣ :
ಶ್ರೀ ಕ್ಷೇತ್ರದ ಶಕ್ತಿಗಳ ಕೃಪಾಕಟಾಕ್ಷದಿಂದ ಹಾಗೂ ಆಡಳಿತ ಮಂಡಳಿ, ಜೀರ್ಣೋದ್ದಾರ ಸಮಿತಿ, ಊರ-ಪರವೂರ ಸಮಸ್ತ ಭಕ್ತಾಭಿಮಾನಿಗಳ ಸಹಕಾರದಿಂದ 2015ರಲ್ಲಿ ಸಂಪೂರ್ಣ ಶಿಲಾಮಯ ಗರಡಿಯು, ಪುನರ್‌ಪ್ರತಿಷ್ಠೆ, ಬ್ರಹ್ಮಕಲಶೋತ್ಸವದೊಂದಿಗೆ ಪುನರ್ ನಿರ್ಮಾಣಗೊಂಡಿರುತ್ತದೆ. ವಿಶೇಷವಾಗಿ ಶ್ರೀ ಕ್ಷೇತ್ರದ ಸುತ್ತು ಪೌಳಿಯು ಇತರ ಗರಡಿಗಳಿಗಿಂತ ಭಿನ್ನವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಪ್ರವೇಶ ದ್ವಾರಗಳನ್ನು ಹೊಂದಿದ್ದು ಸುತ್ತು ಗೋಪುರವು ಈಗ ಸುಮಾರು 60 ವರ್ಷ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ. ಆದ್ದರಿಂದ ಶ್ರೀ ಕ್ಷೇತ್ರದ ಶಕ್ತಿಗಳ ಅನುಜ್ಞೆಯ ಮೇರೆಗೆ ಆಡಳಿತ ಮಂಡಳಿ, ಸುತ್ತು ಪೌಳಿ ನವೀಕರಣ ಸಮಿತಿ ಮತ್ತು ಭಕ್ತಾಭಿಮಾನಿಗಳು ಸುಮಾರು 3 ಕೋಟಿಗೂ ಅಧಿಕ ವೆಚ್ಚದಲ್ಲಿ ನೀಲನಕ್ಷೆಗನುಗುಣವಾಗಿ ವಿಶೇಷ ವಿನ್ಯಾಸದೊಂದಿಗೆ ಸುತ್ತು ಪೌಳಿ ನವೀಕರಣ ಸಂಕಲ್ಪ ಮಾಡಿದ್ದೇವೆಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಉದ್ದೇಶಿತ ಯೋಜನೆಯಲ್ಲಿ ನೂತನವಾಗಿ ನೇಮೋತ್ಸವದ ಕೊಡಿಅಡಿ, ಮಾಯಂದಾಲದೇವಿ ಕಟ್ಟೆ, ಬೈದರ್ಕಳ ನೈವೇದ್ಯ ಕೋಣೆ. ಮೂಲ ತೀರ್ಥಬಾವಿ ನವೀಕರಣ, ಪಿಲಿಚಂಡಿ ದೈವದ ಗುಂಡ ಹಾಗೂ ಭದ್ರತೆಯ ಭಂಡಾರ ಕೊಠಡಿ, ಉಗ್ರಾಣ, ವಿಶಾಲವಾದ ಹೊರಾಂಗಣ ಅನ್ನಛತ್ರದ ಪ್ರಸ್ತಾಪವಿದೆ. ಸಂಪ್ರದಾಯದಂತೆ ಶಿಲಾಮಯ ಗರಡಿ ನಿರ್ಮಾಣದ 12 ವರ್ಷಗಳಿಗೆ (2027) ಬ್ರಹ್ಮಕಲಶೋತ್ಸವದ ಪುಣ್ಯ ಸತ್ಕಾರ್ಯ ಕೈಗೊಳ್ಳುವ ಮಹದಿಚ್ಛೆ ಗರಡಿಯ ಸಮಸ್ತ ಭಕ್ತಾಭಿಮಾನಿಗಳದ್ದಾಗಿದೆ. ಆದುದರಿಂದ ಶ್ರೀ ಕ್ಷೇತ್ರದ ಪರಮ ಭಕ್ತರಾದ ತಾವೆಲ್ಲರೂ ಸುತ್ತು ಪೌಳಿ ನವೀಕರಣದ ಈ ಮಹಾ ಪುಣ್ಯಕಾರ್ಯದಲ್ಲಿ ಭಾಗಿಯಾಗಿ ತನು-ಮನ-ಧನ ಹಾಗೂ ವಸ್ತು (ಮರದ) ರೂಪದಲ್ಲಿ ಸಹಕಾರ ನೀಡಿ ಶ್ರೀ ಕ್ಷೇತ್ರದ ಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ, ನವೀಕರಣ ಸಮಿತಿ, ಹಿರ್ಗಾನ ಗ್ರಾಮಸ್ಥರು ಭಕ್ತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಇನ್ನು, ಸುತ್ತು ಪೌಳಿ ನವೀಕರಣಕ್ಕೆ ರೂ. 25,000/- ಕ್ಕಿಂತ ಮೇಲ್ಪಟ್ಟು ದೇಣಿಗೆ ನೀಡುವ ದಾನಿಗಳ ಹೆಸರನ್ನು ಶಾಶ್ವತ ಫಲಕದಲ್ಲಿ ಕೆತ್ತಿಸಲಾಗುವುದೆಂದು ಮಾಹಿತಿ ನೀಡಿದೆ.

