ಬೆಳ್ತಂಗಡಿ, ಡಿ. 20 : ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದ ಬುರುಡೆ ಚಿನ್ನಯ್ಯ ಇದೀಗ ಐದು ಮಂದಿ ವಿರುದ್ಧ ಬೆದರಿಕೆ ಮತ್ತು ಸೂಕ್ತ ರಕ್ಷಣೆ ನೀಡುವಂತೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ್ದಾನೆ.
ಡಿ.18 ರಂದು ಬೆಳಗ್ಗೆ ಶಿವಮೊಗ್ಗ ಜೈಲಿನಿಂದ ಬಂದಿರುವ ಚಿನ್ನಯ್ಯ ಸಿ.ಎನ್ ತನ್ನ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಜೊತೆ ಡಿ.18 ರಂದು ರಾತ್ರಿ 8 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಿ ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್, ಟಿ, ಯೂಟ್ಯೂಬರ್ ಸಮೀರ್ ಎಮ್.ಡಿ, ಸೌಜನ್ಯ ಮಾವ ವಿಠಲ್ ಗೌಡ, ಗಿರೀಶ್ ಮಟ್ಟಣ್ಣವರ್ ಹಾಗೂ ಸಂಗಡಿಗರಿಂದ ತನಗೆ ಮತ್ತು ತನ್ನ ಪತ್ನಿ ಮಲ್ಲಿಕಾ ಯಾನೆ ನಾಗಮ್ಮ ಗೆ ಜೀವಬೆದರಿಕೆ ಇದೆ. ಈ ಕಾರಣದಿಂದ ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್, ಟಿ, ಯೂಟ್ಯೂಬರ್ ಸಮೀರ್ ಎಮ್.ಡಿ, ಸೌಜನ್ಯ ಮಾವ ವಿಠಲ್ ಗೌಡ, ಗಿರೀಶ್ ಮಟ್ಟಣ್ಣವರ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕೊಡುವ ಬಗ್ಗೆ ದೂರು ನೀಡಿದ್ದು ಅದರಂತೆ ಧರ್ಮಸ್ಥಳ ಪೊಲೀಸರು ಪಿಟಿಷನ್ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಪ್ರಕರಣದಲ್ಲಿ ಪ್ರಕರಣ ಎದುರಿಸುತ್ತಿರುವ ಐದು ಮಂದಿಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆ.

