ಮಂಗಳೂರು : ಬಸ್ ನಡಿಗೆ ಬಿದ್ದು ಯುವತಿ ಸಾವು ಪ್ರಕರಣ – ಅದೇ ಬಸ್ಸಿನಲ್ಲಿದ್ದರು ಮೃತ ಯುವತಿಯ ತಾಯಿ, ಸೋದರಿಯರು !!!

ಮಂಗಳೂರು, ಫೆ. 06 : ಸ್ಕೂಟರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಸಹಸವಾರೆ ಯುವತಿ ದೀಪ್ತಿ ಎಂಬಾಕೆ ಬಸ್ ನ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆ ನಗರದ ನಂತೂರು ಬಸ್ ನಿಲ್ದಾಣದ ಸಮೀಪ ನಡೆದಿತ್ತು. ಈ ದುರ್ಘಟನೆಯಲ್ಲಿ ಅತ್ಯಂತ ನೋವಿನ ಅಂಶವೊಂದು ಬೆಳಕಿಗೆ ಬಂದಿದೆ. ಯಾವ ಬಸ್ಸಿನಡಿಗೆ ಬಿದ್ದು ದೀಪ್ತಿ ಸಾವನ್ನಪ್ಪಿದ್ದಳೋ ಅದೇ ಬಸ್ಸಿನಲ್ಲಿ ದೀಪ್ತಿಯ ತಾಯಿ ಕೂಡಾ ಪ್ರಯಾಣಿಸುತ್ತಿದ್ದರಂತೆ.

Advertisement

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕೆಯಾಗಿರುವ ಶಾಲಿನಿ ಅವರ ಐದು ಹೆಣ್ಣುಮಕ್ಕಳಲ್ಲಿ ದೀಪ್ತಿ ಹಿರಿಯವಳು. ಪ್ರೀತಿಯ ಅಕ್ಕನನ್ನು ಕಳೆದುಕೊಂಡ ಕಿರಿಯ ಸಹೋದರಿಯರ ಆಕ್ರಂದನ ಮುಗಿಲುಮುಟ್ಟಿದೆ. ಇಡೀ ಕುಟುಂಬವೇ ನೀರವ ಮೌನಕ್ಕೆ ಶರಣಾಗಿಬಿಟ್ಟಿದೆ. ಮೃತ ದೀಪ್ತಿ ಕುಟುಂಬವು ಮಂಗಳೂರಿನ ಬಲ್ಲಾಲ್‌ಬಾಗ್ ಸಮೀಪದ ವಿವೇಕನಗರದಲ್ಲಿ ವಾಸವಿದೆ. ದೀಪ್ತಿ ಅವರ ತಂದೆ ಮಹೇಶ್ ಅವರು ಕೂಡ ನಿಗಮದ ಪೌರಕಾರ್ಮಿಕರಾಗಿದ್ದು, ಕೆಲ ವರ್ಷಗಳ ಹಿಂದೆ ನಿಧನರಾದರು. ಅವರ ನಿಧನದ ಬಳಿಕ, ಶಾಲಿನಿ ಅವರನ್ನು ಅನುಕಂಪದ ಆಧಾರದ ಮೇಲೆ ಆ ಹುದ್ದೆಗೆ ನೇಮಕ ಮಾಡಲಾಗಿತ್ತು. ಆಗಿನಿಂದ ಅವರು ತಮ್ಮ ಐದು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದರು.

ದೀಪ್ತಿ ಖಾಸಗಿ ಕಾಲೇಜೊಂದರಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿ ತಾತ್ಕಾಲಿಕವಾಗಿ ಎಲ್‌ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಹೋದರಿಯರಲ್ಲಿ ಒಬ್ಬರು ಬಿಇಡಿ, ಮತ್ತೊಬ್ಬರು ಪಿಯುಸಿ ವಿದ್ಯಾಭ್ಯಾಸದಲ್ಲಿದ್ದು, ಉಳಿದ ಇಬ್ಬರು ಶಾಲಾ ವಿದ್ಯಾರ್ಥಿನಿಯರು. ಘಟನೆ ನಡೆದ ರಾತ್ರಿ ದೀಪ್ತಿ ಅವರು ಕಿಶೋರ್ ಎಂಬವರೊಂದಿಗೆ ಸ್ಕೂಟರ್‌ನಲ್ಲಿ ವಾಮಂಜೂರಿನ ತಿರುವೈಲು ಸಮೀಪ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ಇದೇ ವೇಳೆ ಹಿಂಬದಿಯಿಂದ ಬಂದ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಆ ಬಸ್‌ನಲ್ಲೇ ದೀಪ್ತಿಯ ತಾಯಿ ಹಾಗೂ ಸಹೋದರಿಯರು ಪ್ರಯಾಣಿಸುತ್ತಿದ್ದುದರಿಂದ, ಮಗಳ ಸಾವನ್ನು ಕಣ್ಣೆದುರೇ ನೋಡಬೇಕಾದ ತಾಯಿಯ ಸ್ಥಿತಿ ಎಲ್ಲರ ಮನಕಲಕುವಂತಿತ್ತು. ಇಂತಹ ನೋವನ್ನು ಬೇರೆ ಯಾವ ತಾಯಿಯೂ ಅನುಭವಿಸಬಾರದು ಎಂದು ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಯುವತಿಯ ಸಾವನ್ನು ಖಂಡಿಸಿ, ದಲಿತ ಸಂಘಟನೆಗಳ ಮುಖಂಡರು ಗುರುವಾರ ಕದ್ರಿ ಪೊಲೀಸ್ ಠಾಣೆಯ ಎದುರು ಕೆಲಕಾಲ ಪ್ರತಿಭಟನೆ ನಡೆಸಿ, ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಘಟನೆಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಸುಧೀರ್‌ ಕುಮಾರ್ ರೆಡ್ಡಿ, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ವರ್ಷ ಈಗಾಗಲೇ ನಗರ ವ್ಯಾಪ್ತಿಯಲ್ಲಿ ಆರರಿಂದ ಏಳು ಅಪಘಾತ ಪ್ರಕರಣಗಳು ಸಂಭವಿಸಿವೆ ಎಂದು ಅವರು ತಿಳಿಸಿ, ಕಾನೂನಿನ ಪ್ರಕಾರ ಎಲ್ಲ ಪ್ರಕರಣಗಳನ್ನೂ ನ್ಯಾಯಸಮ್ಮತವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.