ಕಡಬ, ಜ. 12 : ಮನೆಯಂಗಳಕ್ಕೆ ನುಗ್ಗಿ ಸಾಕುನಾಯಿಯನ್ನು ಚಿರತೆಯೊಂದು ಬೇಟೆಯಾಡಿ ಹೊತ್ತೊಯ್ದಿರುವ ಘಟನೆ ಪಂಜ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ಎಡಮಂಗಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಸುಮ ನೂಜಿಲ ಅವರ ಮನೆಯಂಗಳದಿಂದ ಬೇಟೆ ನಾಯಿಯನ್ನು ಹೊತ್ತೊಯ್ದಿದೆ.
ಸುಮ ನೂಜಿಲ ಅವರ ಕುಟುಂಬದವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು. ಸಾಯಂಕಾಲ ಸುಮಾರು 7 ಗಂಟೆಯ ಹೊತ್ತಿಗೆ ಮನೆಯಂಗಳಕ್ಕೆ ಚಿರತೆ ಲಗ್ಗೆ ಇಟ್ಟಿದೆ. ಸುಮಾರು ಒಂದು ಗಂಟೆಗಳ ಕಾಲ ಮನೆಯ ಸುತ್ತಮುತ್ತಲೇ ಹೊಂಚು ಹಾಕಿದ ಚಿರತೆ, ಅಂತಿಮವಾಗಿ ಸಾಕು ನಾಯಿಯನ್ನು ಕಚ್ಚಿಕೊಂಡು ಪರಾರಿಯಾಗಿದೆ. ಈ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಳೆದ ಕೆಲ ದಿನಗಳಿಂದ ಈ ಪರಿಸರದಲ್ಲಿ ಸುಮಾರು ನಾಲ್ಕು ಮನೆಗಳ ಸಾಕು ನಾಯಿಗಳು ನಿಗೂಢವಾಗಿ ನಾಪತ್ತೆಯಾಗಿದ್ದವು. ಆದರೆ ಆ ಮನೆಗಳಲ್ಲಿ ಸಿಸಿಟಿವಿ ಇಲ್ಲದ ಕಾರಣ ಚಿರತೆಯ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ. ಇದೀಗ ಸುಮ ನೂಜಿಲ ಅವರ ಮನೆಯ ದೃಶ್ಯಾವಳಿಗಳಿಂದಾಗಿ, ಈ ಭಾಗದಲ್ಲಿ ಚಿರತೆ ಬೀಡು ಬಿಟ್ಟಿರುವುದು ಖಚಿತವಾಗಿದ್ದು, ಈ ಹಿಂದಿನ ನಾಯಿಗಳ ನಾಪತ್ತೆಗೂ ಇದೇ ಚಿರತೆ ಕಾರಣವೆಂಬ ಶಮಕೆ ವ್ಯಕ್ತವಾಗಿದೆ.
ಚಿರತೆ ದಾಳಿಯ ಭೀತಿಯಿಂದಾಗಿ ಗ್ರಾಮಸ್ಥರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ರಬ್ಬರ್ ಟ್ಯಾಪಿಂಗ್ ಮಾಡಲು ಕಾರ್ಮಿಕರು ತೆರಳುತ್ತಿಲ್ಲ, ಇದು ಕೃಷಿಕರಿಗೆ ಆರ್ಥಿಕ ನಷ್ಟವನ್ನೂ ತಂದೊಡ್ಡುತ್ತಿದೆ. ಶಾಲಾ ಮಕ್ಕಳು ಮತ್ತು ಕಾರ್ಮಿಕರು ದಿನನಿತ್ಯ ಕಾಡು ಹಾದಿಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇರುವುದರಿಂದ, ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸುಮಾರು ಎರಡು ವಾರಗಳ ಹಿಂದೆ ಪಾಲೋಳಿ ಸೇತುವೆ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿತ್ತು. ಆದರೆ ಅವರ ಭೇಟಿಯ ಉದ್ದೇಶವೇನು ಎಂಬುದು ಯಾರಿಗೂ ತಿಳಿದಿಲ್ಲ. ಅರಣ್ಯ ಇಲಾಖೆ ಕೇವಲ ಭೇಟಿ ನೀಡುವುದಲ್ಲದೆ, ತಕ್ಷಣ ಬೋನು ಇಟ್ಟು ಈ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

