ಕಲಬುರಗಿ : 2019ರ ಆಗಸ್ಟ್‌ನಲ್ಲಿ ಚಿತ್ತಾಪುರ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣವನ್ನು ಹಿಂಪಡೆಯುವ ರಾಜ್ಯ ಸರಕಾರದ ನಿರ್ಧಾರಕ್ಕೆ ಕಲಬುರಗಿ ಹೈಕೋರ್ಟ್ ಪೀಠ ತಡೆ ನೀಡಿದೆ. ಪ್ರಕರಣ ಹಿಂಪಡೆದರೆ ಪೊಲೀಸರ ಆತ್ಮಸ್ಥೈರ್ಯ ಕುಂದುತ್ತದೆ ಎಂದು ಅರ್ಜಿದಾರರ ವಾದಕ್ಕೆ ಹೈಕೋರ್ಟ್ ಸ್ಪಂದಿಸಿದೆ. ಡಿಸೆಂಬರ್ 4ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿ ಆದೇಶಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ ಮತ್ತೊಂದು ಹಿನ್ನಡೆಯಾದಂತಾಗಿದೆ.
ಪ್ರಕರಣ ಹಿಂಪಡೆದರೆ ಪೊಲೀಸರ ಆತ್ಮಸ್ಥೈರ್ಯ ಕುಂದುತ್ತದೆ. ಆದ್ದರಿಂದ ಕಲ್ಲು ತೂರಾಟ ಪ್ರಕರಣ ಹಿಂಪಡೆಯಬಾರದು ಎಂದು ಬೆಂಗಳೂರಿನ ಗಿರೀಶ್ ಭಾರದ್ವಾಜ್ ಎಂಬುವವರು ಸರಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ ಅವರಿದ್ದ ಪೀಠ ವಿಚಾರಣೆ ನಡೆಸಿ, ರಾಜ್ಯ ಸರಕಾರದ ನಿರ್ಧಾರಕ್ಕೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿ ಆದೇಶ ಮಾಡಿದೆ.
ಸರಕಾರದ ಪರ ವಾದ ಮಂಡನೆ ಮಾಡಿದ್ದ ಸಿದ್ದು ಪಾಟೀಲ್, ಅರ್ಜಿದಾರರು ಪ್ರಕರಣಕ್ಕೆ ಸಂಬಂಧ ಇಲ್ಲದ ಕಾರಣ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ತಿಳಿಸಿದ್ದರು. ಈ ವೇಳೆ ಅರ್ಜಿದಾರರ ಪರ ಸುಹಾಸ್ ದೀಕ್ಷಿತ್ ವಾದ ಮಂಡನೆ ಮಾಡಿ, ಪೊಲೀಸ್ ವ್ಯವಸ್ಥೆಯ ಆತ್ಮಬಲ ಹೆಚ್ಚಳ ಮಾಡುವ ಅರ್ಜಿ ಇದಾಗಿದೆ ಎಂದು ಹೇಳಿದ್ದರು. ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್, ಸರಕಾರದ ನಿರ್ಧಾರಕ್ಕೆ ತಡೆ ನೀಡಿತು.
ಏನಿದು ಕಲ್ಲು ತೂರಾಟ ಪ್ರಕರಣ ?
2019ರ ಬಕ್ರೀದ್ ಹಬ್ಬದ ವೇಳೆ ಆಗಸ್ಟ್ 11ರಂದು ಚಿತ್ತಾಪುರದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ಹಿಡಿದ ಕೆಲ ಯವಕರು ವಾಹನವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಸ್ಥಳಕ್ಕೆ ಆಗಮಿಸಿದ ಕೆಲವು ಯುವಕರು ಗಲಾಟೆ ಮಾಡಿದ್ದರು. ಇದಲ್ಲದೆ ಗೋ ರಕ್ಷಣೆ ಮಾಡಿದ್ದ ಯುವಕರನ್ನು ಠಾಣೆಯಿಂದ ಹೊರ ತಂದು ಹಲ್ಲೆ ಮಾಡಿದ್ದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ್ದ ಪೊಲೀಸರು ಉದ್ರಿಕ್ತ ಗುಂಪಿನ ವಿರುದ್ಧ ಲಘು ಲಾಠಿ ಪ್ರಹಾರ ನಡೆಸಿದ್ದರು. ಇದರಿಂದ ಕೋಪಗೊಂಡ ಯುವಕರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತ್ತು. ಪ್ರಕರಣ ನಡೆದ ಕೆಲವು ದಿನಗಳ ನಂತರ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡು 13 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಹ ಸಲ್ಲಿಕೆ ಮಾಡಿದ್ದರು.

