ಚಿಕ್ಕಮಗಳೂರು, ಜ.07 : ಹಣದ ಆಸೆಗೆ ತಂದೆಯೇ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರು ಹೋಬಳಿಯ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.
ತಾಯಿ ಇಲ್ಲದ ಅಸಹಾಯಕ ಬಾಲಕಿಯನ್ನು ಆಕೆಯ ತಂದೆ ಮತ್ತು ಅಜ್ಜಿ ಸೇರಿ ನರಕಕ್ಕೆ ತಳ್ಳಿ, ಆಕೆಯ ಭವಿಷ್ಯವನ್ನೇ ಚಿವುಟಿ ಹಾಕಿದ್ದಾರೆ. ಈ ಪಾಪಿಗಳಿಗೆ ಕಠಿಣ ಶಿಕ್ಷೆಯಾಗಬೇಕಿದೆ.
ಘಟನೆಯ ವಿವರ : ಗ್ರಾಮದ ಗಿರೀಶ್ ಎಂಬಾತ ತನ್ನ 16 ವರ್ಷದ ಮಗಳನ್ನು ಹಣಕ್ಕಾಗಿ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕೃತ್ಯಕ್ಕೆ ಬಾಲಕಿಯ ಅಜ್ಜಿ ನಾಗರತ್ನ ಕೂಡ ಸಾಥ್ ನೀಡಿದ್ದಾಳೆ. ಆರೋಪಿಗಳು ಭರತ್ ಶೆಟ್ಟಿ ಎಂಬ ವ್ಯಕ್ತಿಯೊಂದಿಗೆ ಸೇರಿ ಬಾಲಕಿಯನ್ನು ಮಂಗಳೂರಿಗೆ ಕರೆದೊಯ್ದು, ಅಲ್ಲಿ ಆರು ದಿನಗಳ ಕಾಲ ಸುಮಾರು 10ಕ್ಕೂ ಹೆಚ್ಚು ಕಾಮುಕರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಬಾಲಕಿ ಋತುಸ್ರಾವದ (Periods) ಅವಧಿಯಲ್ಲಿದ್ದರೂ ಸಹ ಬಲವಂತವಾಗಿ ಲೈಂಗಿಕ ಕೃತ್ಯಕ್ಕೆ ಎಳೆದೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಂಗಳೂರಿನಿಂದ ಊರಿಗೆ ಮರಳಿದ ನಂತರ, ನರಕಯಾತನೆ ಅನುಭವಿಸಿದ್ದ ಬಾಲಕಿ ಧೈರ್ಯ ಮಾಡಿ ತನ್ನ ಚಿಕ್ಕಪ್ಪ ಮತ್ತು ಅತ್ತೆಗೆ ವಿಷಯ ತಿಳಿಸಿದ್ದು, ಅವರ ಮೂಲಕ ಬೀರೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದೂರು ದಾಖಲಿಸಿಕೊಂಡ ಬೀರೂರು ಪೊಲೀಸರು ಬಾಲಕಿಯ ತಂದೆ ಗಿರೀಶ್, ಅಜ್ಜಿ ನಾಗರತ್ನ ಹಾಗೂ ಭರತ್ ಶೆಟ್ಟಿ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

