ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ, ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಒಗ್ಗಟ್ಟು ಪ್ರದರ್ಶನ ಕಂಡುಬಂದಿದೆ. ಇದಕ್ಕೆ, ಸಾಕ್ಷಿಯೆಂಬಂತೆ ಇಂದು ಉಪಾಹಾರವನ್ನು ಜೊತೆಯಾಗೇ ಕುಳಿತು ಸೇವಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಈ ಬೆಳವಣಿಗೆಗಳನ್ನು”ಡ್ರಾಮಾ” ಎಂದು ಲೇವಡಿ ಮಾಡಿದ್ದಾರೆ.
ಮಾದ್ಯಮ ಮಿತ್ರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, “ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಡ್ರಾಮಾ ನಡೆಯುತ್ತಿದ್ದು, ಇದು ಎಲ್ಲಿಯವರೆಗೆ ನಡೆಯುತ್ತದೆ ಎಂಬುದನ್ನು ಕಾದುನೋಡೋಣ. ಅಧಿಕಾರಕ್ಕಾಗಿ ಸಿಎಂ-ಡಿಸಿಎಂ ಕಚ್ಚಾಡುತ್ತಿರುವುದು, ರಾಜ್ಯದ ಜನತೆಗೆ ಮನರಂಜನೆ ನೀಡುತ್ತಿದೆ” ಎಂದು ಎಚ್‌ಡಿ ಕುಮಾರಸ್ವಾಮಿ ಲೇವಡಿ ಮಾಡಿದರು. “ಅಧಿಕಾರಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಘರ್ಷಣೆ ನಡೆಯುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ನಾನು ಬಯಸುವುದಿಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿ ನಾಟಕ ನಡೆಯುತ್ತಿದ್ದು, ಈ ನಾಟಕ ಅಂತಿಮ ಹಂತ ತಲುಪಿದೆ. ಕೊನೆಯಲ್ಲಿ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ನಾವೂ ಕೂಡ ಕಾತರದಿಂದ ಕಾಯುತ್ತಿದ್ದೇವೆ” ಎಂದು ಕೇಂದ್ರ ಸಚಿವರು ಸೂಚ್ಯವಾಗಿ ಹೇಳಿದರು.

