ಭಾರತದ ಬ್ಯಾಟಿಂಗ್ ಆರ್ಭಟ – ಜೇಕಬ್ ಬೆಥೆಲ್ ಹೋರಾಟ ವ್ಯರ್ಥ : ಫೈನಲ್ ಗೇರಿದ ಟೀಮ್ ಇಂಡಿಯಾ

ಮುಂಬೈ : ಐಸಿಸಿ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯವು ಬ್ಯಾಟರ್‌ಗಳ ಆರ್ಭಟಕ್ಕೆ ಸಾಕ್ಷಿಯಾಯಿತು.

ಇಂಗ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಆದರೆ ಬೌಲರ್‌ಗಳು ಟೀಮ್ ಇಂಡಿಯಾದ ಭರ್ಜರಿ ಆಟವನ್ನು ನಿಯಂತ್ರಿಸುವಲ್ಲಿ ವಿಫಲರಾದರು.

Advertisement



ಕಳೆದ ಪಂದ್ಯದಂತೆ ಸಂಜು ಸ್ಯಾಟ್ಸನ್ ಸೆಮಿಫೈನಲ್‌ನಲ್ಲೂ ಸ್ಫೋಟಕವಾಗಿ ಬ್ಯಾಟ್ ಬೀಸಿದರು. ಮಹತ್ವದ ಪಂದ್ಯದಲ್ಲೂ ಅಭಿಷೇಕ್ ಶರ್ಮಾ (9 ರನ್) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಇಶಾನ್ ಕಿಶನ್ 18 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 39 ರನ್ ಗಳಿಸಿ ರಶೀದ್ ಅವರ ಎಸೆತಕ್ಕೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.

ಇನ್ನೊಂದು ಕಡೆ ಬೌಲರ್ ಯಾರೇ ಇದ್ರು ಸಂಜು ಸ್ಯಾಟ್ಸನ್ ಕ್ಯಾರೇ ಮಾಡದೆ ಸಿಕ್ಸರ್, ಬೌಂಡರಿಗಳ ಸುರಿಮಳೆ ಗೈದರು. ಆರಂಭದಲ್ಲಿ 15 ರನ್‌ನಲ್ಲಿ ಸಂಜು ಅವರ ಸುಲಭ ಕ್ಯಾಚ್‌ನ್ನು ಇಂಗ್ಲೆಂಡ್ ಕ್ಯಾಪ್ಟನ್ ಬ್ರೂಕ್ ಕೈಚೆಲ್ಲಿದ್ದು, ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಸಂಜು 42 ಎಸೆತದಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಿತ 89 ರನ್‌ಗಳಿಸಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ವಿಲ್ ಜ್ಯಾಕ್ಸ್ ಎಸೆತದಲ್ಲಿ ಫಿಲ್ ಸಾಲ್ಟ್ ಅವರಿಗೆ ಕ್ಯಾಚ್ ಕೊಟ್ಟರು. ಶಿವಂ ದುಬೆ ಸ್ಪೋಟಕವಾಗಿ 43 ರನ್‌ಗಳಿಸಿ ರನೌಟ್ ಆದರು.

ಸೂರ್ಯಕುಮಾರ್ ಬರೀ 11 ರನ್‌ಗಳಿಸಿ ಔಟಾದರು. ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಅವರ ಬಿರುಸಿನ ಆಟದಿಂದ 20 ಓವರ್‌ನಲ್ಲಿ 7 ವಿಕೆಟ್ ಕಳೆದುಕೊಂಡು 253 ಬೃಹತ್‌ ಮೊತ್ತ ದಾಖಲಿಸಿತು.

ದೊಡ್ಡ ಮೊತ್ತವನ್ನು ಚೇಸ್ ಮಾಡಲು ಮೈದಾನಕ್ಕಿಳಿದ ಇಂಗ್ಲೆಂಡ್ ಆರಂಭದಲ್ಲೇ ಫಿಲ್ ಸಾಲ್ಟ್ ಅವರನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಸಾಲ್ಟ್ 5 ರನ್ ಗಳಿಸಿ ಔಟಾದರು. ಭರವಸೆಯ ಆಟಗಾರ ಜಾಸ್ ಬಟ್ಲರ್ ಫೋರ್, ಸಿಕ್ಸರ್ ಮೂಲಕ ಅಬ್ಬರಿಸಿ, ಕೊನೆಗೆ 25 ರನ್ ಗಳಿಸಿ ವರುಣ್ ಚಕ್ರವರ್ತಿ ಅವರಿಗೆ ವಿಕೆಟ್ ಒಪ್ಪಿಸಿದರು. ಕ್ಯಾಪ್ಟನ್ ಹ್ಯಾರಿ ಬ್ರೂಕ್ 7 ರನ್ ಗಳಿಸಿ ಜಸ್ಟೀತ್ ಬುಮ್ರಾ ಅವರಿಗೆ ವಿಕೆಟ್ ಒಪ್ಪಿಸಿದರು. ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದ ಟಾಮ್ ಬ್ಯಾಂಟನ್ ಅಕ್ಷರ್ ಅವರ ಎಸೆತಕ್ಕೆ 17 ರನ್ ಗಳಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

4 ವಿಕೆಟ್ ಕಳೆದುಕೊಂಡ್ರು ಮಧ್ಯಮ ಕ್ರಮಾಂಕದ ಜೇಕಬ್ ಬೆಥೆಲ್, ವಿಲ್ ಜ್ಯಾಕ್ಸ್ ನಡುವೆ ಉತ್ತಮ ಜತೆಯಾಟ ಬಂತು. ಜೇಕಬ್ ರಭಸದ ಬೌಂಡರಿ ಸಿಕ್ಸರ್ಸ್ ಮೂಲಕ ತಂಡಕ್ಕೆ ಆಸರೆಯಾದರು.

35 ರನ್ ಗಳಿಸಿದ ವಿಲ್ ಜ್ಯಾಕ್ಸ್ ಆರ್ಷ್‌ದೀಪ್ ಎಸೆತಕ್ಕೆ ಅಕ್ಷ‌ರ್ ಪಟೇಲ್ ಅವರಿಗೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ಅಕ್ಷ‌ರ್ ಪಟೇಲ್ ಅವರ ಅದ್ಭುತ ಕ್ಯಾಚ್ ಪಂದ್ಯದ ಚಿತ್ರಣವನ್ನು ಬದಲಾಯಿಸಿತು.

ಜೇಕಬ್ ಬೆಥೆಲ್ ಅರ್ಧ ಶತಕದ ಬಳಿಕ ಮತ್ತಷ್ಟು ಸ್ಪೋಟಕವಾಗಿ ಬ್ಯಾಟ್ ಬೀಸಿದರು. ಆದರೆ ಅಂತಿಮ ಹಂತದಲ್ಲಿ ಬುಮ್ರಾ ನಿಯಂತ್ರಿತ ಓವರ್ ಎಸೆದು, ರನ್ ನಿಲ್ಲಿಸಿದರು. 22ರ ಹರೆಯದ ಜೇಕಬ್ ಬೆಥೆಲ್ 45 ಎಸೆತದಲ್ಲಿ 7 ಬೌಂಡರಿ, 8 ಸಿಕ್ಸರ್‌ನೊಂದಿಗೆ ಶತಕ ಸಿಡಿಸಿ ಕೊನೆಯವರೆಗೂ ಹೋರಾಟ ನೀಡಿದರು.

ಅಂತಿಮ 6 ಎಸೆತದಲ್ಲಿ 30ರ ಅವಶ್ಯಕತೆಯಿತ್ತು. ಶಿವಂ ದುಬೆ ಅವರು ಓವರ್‌ ಎಸೆದರು. ಮೊದಲ ಎಸೆತದಲ್ಲಿ 2 ರನ್ ಓಡುವ ಭರದಲ್ಲಿ ಜೇಕಬ್ ರನೌಟ್ ಆದರು. ಜೇಕಬ್ 48 ಎಸೆತಕ್ಕೆ 8 ಬೌಂಡರಿ, 7 ಸಿಕ್ಸರ್ ಸಹಿತ 105 ರನ್ ಗಳಿಸಿದರು. ಇಂಗ್ಲೆಂಡ್ ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 246 ರನ್ ಗಳಿಸಿ ಭಾರತಕ್ಕೆ ಶರಣಾಯಿತು. 7 ರನ್‌ಗಳ ಅಂತರದಿಂದ ಭಾರತ ಗೆದ್ದುಕೊಂಡಿತು.

ಭಾರತದ ಪರ ಪಾಂಡ್ಯ 2 ವಿಕೆಟ್, ಬುಮ್ರಾ, ವರುಣ್, ಅಕ್ಷ‌ರ್, ಆರ್ಷ್‌ದೀಪ್ 1 ವಿಕೆಟ್ ಪಡೆದು ಮಿಂಚಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.