ನವದೆಹಲಿ : ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮಹತ್ವದ ಸುಳಿವು ದೊರೆತಿದೆ. ದೆಹಲಿ ಸ್ಫೋಟ ಪ್ರಕರಣದಲ್ಲಿ ಸೂಸೈಡ್ ಬಾಂಬರ್ ಎಂದು ಶಂಕಿಸಲಾಗಿರುವ ಡಾ. ಉಮರ್ ಮೊಹಮ್ಮದ್‌ನ ಮೊದಲ ಚಿತ್ರ ಈಗ ಬಹಿರಂಗವಾಗಿದೆ. ಸೋಮವಾರ ಸಂಜೆ ಕೆಂಪು ಕೋಟೆ ಬಳಿ ಸ್ಫೋಟಗೊಂಡ ಬಿಳಿ ಬಣ್ಣದ ಹ್ಯುಂಡೈ ಐ20 ಕಾರಿನ ಮಾಲೀಕ ಉಮರ್ ಆಗಿದ್ದು, ಈ ಘಟನೆಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದರು. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಈ ಶಂಕಿತ ಆತ್ಮಾಹುತಿ ಬಾಂಬರ್‌ನ ಮೊದಲ ಚಿತ್ರ ಸಿಕ್ಕಿದೆ.
1989ರ ಫೆಬ್ರುವರಿ 24 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜನಿಸಿದ ಉಮರ್, ಆಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಪೊಲೀಸ್ ತಂಡಗಳು ಭೇದಿಸಿದ್ದ “ವೈಟ್ ಕಾಲರ್” ಭಯೋತ್ಪಾದನಾ ಜಾಲದ ಪ್ರಮುಖ ಸದಸ್ಯರಾದ ಡಾ. ಆದೀಲ್ ಅಹ್ಮದ್ ರಾಥರ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ಅವರ ಆಪ್ತ ಸಹಾಯಕನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖಾಧಿಕಾರಿಗಳು ಈ ಜಾಲದ ಇಬ್ಬರು ಪ್ರಮುಖ ಸದಸ್ಯರನ್ನು ಬಂಧಿಸಿ, ಕಳೆದ ಕೆಲವು ದಿನಗಳಲ್ಲಿ ಸುಮಾರು 2,900 ಕೆಜಿಗೂ ಹೆಚ್ಚು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದ ತಕ್ಷಣ ಉಮರ್ ಆತಂಕ್ಕೀಡಾಗಿ ಆಗಿ ಫರಿದಾಬಾದ್‌ನಿಂದ ತಪ್ಪಿಸಿಕೊಂಡಿದ್ದ. ವರದಿಯ ಪ್ರಕಾರ, ಈತನೇ ಸ್ಫೋಟಕ್ಕೆ ಕಾರಣನಾಗಿದ್ದಾನೆನ್ನಲಾಗಿದೆ. ಈ ಬಗ್ಗೆ ತನಿಖೆಯಿಂದಷ್ಟೇ ಖಚಿತ ಮಾಹಿತಿ ಹೊರಬರಬೇಕಾಗಿದೆ.
ಕಾರ್ ಬಾಂಬ್ ಸ್ಫೋಟ ನಡೆಸಿದ್ದು ಹೇಗೆ ?
“ಉಮರ್ ಮೊಹಮ್ಮದ್ ಮತ್ತು ಆತನ ಸಹಚರರು ದಾಳಿ ನಡೆಸಲು ಅಮೋನಿಯಂ ನೈಟ್ರೇಟ್ ಫ್ಯುಯೆಲ್ ಆಯಿಲ್ ಅನ್ನು ಬಳಸಿದ್ದಾರೆ. ಅವರು ಕಾರಿನಲ್ಲಿ ಡಿಟೋನೇಟರ್ ಇರಿಸಿ, ಕೆಂಪು ಕೋಟೆಯ ಸಮೀಪದ ಜನನಿಬಿಡ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಿದರು” ಎಂದು ಮೂಲಗಳು ತಿಳಿಸಿವೆ. ಸಿಸಿಟಿವಿ ವಿಡಿಯೋ ಮತ್ತು ಚಿತ್ರಗಳ ಪ್ರಕಾರ, ಕೆಂಪು ಕೋಟೆ ಬಳಿ ಸ್ಫೋಟಗೊಂಡ ಬಿಳಿ ಹ್ಯುಂಡೈ ಐ20 ಕಾರು ಬಾದರ್‌ಪುರ ಗಡಿಯ ಮೂಲಕ ದೆಹಲಿಗೆ ಪ್ರವೇಶಿಸಿ, ಹೊರ ವರ್ತುಲ ರಸ್ತೆಯ ಮೂಲಕ ಹಳೆಯ ದೆಹಲಿಗೆ ಬಂದಿದೆ. ಮೂಲಗಳ ಪ್ರಕಾರ, HR 26CE7674 ನಂಬರ್ ಪ್ಲೇಟ್ ಹೊಂದಿದ್ದ. ಈ ವಾಹನವನ್ನು ಸಂಜೆ 3:19ಕ್ಕೆ ಕೆಂಪು ಕೋಟೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಸುಮಾರು 6:30ರ ಸುಮಾರಿಗೆ ಆತ್ಮಾಹುತಿ ಬಾಂಬರ್ ಅಲ್ಲಿಂದ ಕಾರನ್ನು ಹೊರತೆಗದಿದ್ದಾನೆ. ಈ ಮೂರು ಗಂಟೆಗಳಿಗೂ ಹೆಚ್ಚು ಕಾಲ ಶಂಕಿತ ಬಾಂಬರ್ ಒಂದು ನಿಮಿಷವೂ ಕಾರಿನಿಂದ ಹೊರಬಂದಿರಲಿಲ್ಲ ಎನ್ನುವ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ಪ್ರಾರಂಭಿಕ ತನಿಖೆಯ ಪ್ರಕಾರ, ದಾಳಿಗೆ ಬಳಸಿದ ಕಾರನ್ನು ಒಬ್ಬರಿಂದ ಒಬ್ಬರಿಗೆ ಬದಲಿಸಲಾಗಿದೆ. ಮಾರ್ಚ್ 2025ರಲ್ಲಿ ಸಲ್ಮಾನ್ ಎಂಬಾತನಿಂದ ದೇವಿಂದರ್ ಎಂಬಾತನಿಗೆ ಕಾರನ್ನು ಮಾರಾಟವಾಗಿತ್ತು. ನಂತರ, ಅಕ್ಟೋಬರ್ 29 ರಂದು ದೇವಿಂದರ್‌ನಿಂದ ಅಮೀರ್‌ಗೆ, ತದನಂತರ ತಾರಿಖ್ ಮತ್ತು ಉಮರ್‌ಗೆ ಹಸ್ತಾಂತರಗೊಂಡಿತ್ತು. ಅಮೀರ್ ಮತ್ತು ತಾರಿಖ್ ಇಬ್ಬರನ್ನೂ ದೆಹಲಿ ಪೊಲೀಸ್ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಅಮೀರ್, ಡಾ. ಉಮರ್ ಮೊಹಮ್ಮದ್‌ನ ಸಹೋದರನಾಗಿದ್ದಾನೆ. ದೇವಿಂದರ್‌ನಿಂದ ಕಾರು ಖರೀದಿಸಿದ ನಂತರ ಆತ ಕಾರಿನ ಕೀಯನ್ನು ಹಿಡಿದಿರುವುದು ಸಿಸಿ ಟಿವಿಯ ಚಿತ್ರದಲ್ಲಿ ಕಂಡುಬಂದಿದೆ.

