ಧರ್ಮಸ್ಥಳ : ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಈ ಬಾರಿಯ ಲಕ್ಷದೀಪೋತ್ಸವವು ನ. 15ರಿಂದ ಮೊದಲ್ಗೊಂಡು ನ. 20ಕ್ಕೆ ಸಮಾಪನೆಗೊಳ್ಳಲಿದೆ. ಲಕ್ಷ ದೀಪೋತ್ಸವಕ್ಕೆ ಶ್ರೀ ಕ್ಷೇತ್ರದಲ್ಲಿ ಸಿದ್ಧತೆ ಭರದಿಂದ ಸಾಗುತ್ತಿದೆ. ದೇವಸ್ಥಾನದ ವಠಾರದಲ್ಲಿ ಸ್ವಚ್ಛತೆ ಸೇರಿದಂತೆ ಎಲ್ಲಾ ಕಾರ್ಯಗಳು ನೂರಾರು ಕಾರ್ಮಿಕರ ಮುಖೇನ ನಡೆಯುತ್ತಿದೆ. ಈ ಬಾರಿಯ ಲಕ್ಷ ದೀಪೋತ್ಸವದ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಸ್ವಾಗತ ಗೋಪುರದ ಸಿದ್ಧತಾ ಕಾರ್ಯವೂ ಅಂತಿಮ ಹಂತದಲ್ಲಿದೆ. ವಸ್ತುಪ್ರದರ್ಶನ ಮಳಿಗೆಗಳ ಸಿದ್ಧಂತೆ ಭಾಗಶ: ಪೂರ್ಣಗೊಂಡಿದೆ.

ಲಕ್ಷದೀಪೋತ್ಸವಕ್ಕಾಗಿ ಅಳವಡಿಸಲಾಗಿರುವ ರಸ್ತೆ ಬದಿಯ ಸ್ವಾಗತ ಗೋಪುರಗಳು ಭಕ್ತರನ್ನು ಆಕರ್ಷಿಸುತ್ತಿದೆ. ವಿಭಿನ್ನ ಶೈಲಿಯ ಕಂಬಗಳು ರಸ್ತೆಯುದ್ದಕ್ಕೂ ಇರಿಸಲಾಗಿದ್ದು, ಕಣ್ಮಣ ಸೆಳೆಯುತ್ತಿದೆ.


ಇನ್ನು, ಲಕ್ಷದೀಪೋತ್ಸವಕ್ಕೆ ಪ್ರತಿ ದಿನ ಕೂಡಾ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ವ್ಯಾಪಾರವೂ ಕೂಡಾ ಬಲು ಜೋರಾಗಿಯೇ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಈಗಾಗಲೇ ವ್ಯಾಪಾರಸ್ಥರು ಕೂಡಾ ತಮ್ಮ ತಮ್ಮ ಅಂಗಡಿಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೂರದೂರಿನ ವ್ಯಾಪಾರಸ್ತರು ಈಗಾಗಲೇ ದೇವಸ್ಥಾನದ ವಠಾರದಲ್ಲಿ ಬೀಡುಬಿಟ್ಟಿದ್ದಾರೆ.

ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಸಾಹಿತ್ಯ ಸಮ್ಮೇಳನ, ಸರ್ವಧರ್ಮ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವಂತೆಯೇ ಆಟದ ತೊಟ್ಟಿಲು ಬಲು ಆಕರ್ಷಣೀಯ. ಅದಕ್ಕಾಗೆಂದೇ ಬಹಳಷ್ಟು ಮಂದಿ ಲಕ್ಷದೀಪೋತ್ಸವಕ್ಕೆ ಆಗಮಿಸಿದ್ದಾರೆ. ಈ ಬಾರಿಯ ಲಕ್ಷದೀಪೋತ್ಸವದ ಆಟದ ತೊಟ್ಟಿಲು ಮಹೋತ್ಸವ ಸಭಾಭವನದ ಹಿಂಭಾಗದ ಮೈದಾನದಲ್ಲಿ ಇರಲಿದೆ. ಈಗಾಗಲೇ ಆಟದ ತೊಟ್ಟಿಲು ನಿರ್ವಹಿಸುವ ಕಂಪೆನಿಗಳ ಕಾರ್ಮಿಕರು ಆಗಮಿಸಿ, ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.



