ರಾಮನಗರ, ಫೆ. 18 : ಈ ಬಾರಿಯ ಬಜೆಟ್ ಮಂಡನೆಯ ಬಳಿಕ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಸ್ಫೋಟಗೊಳ್ಳಲಿದೆಯೇ ಎನ್ನುವ ಅನುಮಾನ ವ್ಯಾಪಕವಾಗಿ ಕಾಡತೊಡಗಿದೆ. ಈ ಬಗ್ಗೆ ಹಲವು ವಿದ್ಯಾಮಾನಗಳು ನಡೆಯುತ್ತಿದ್ದು, ಮಾರ್ಮಿಕ ಹೇಳಿಕೆಗಳೂ ಕಾಂಗ್ರೆಸ್ ನಾಯಕರಿಂದಲೇ ಕೇಳಿ ಬರುತ್ತಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ಶಾಸಕರಲ್ಲಿ ಒಬ್ಬರಾದ ಮತ್ತು ರಾಮನಗರ ಶಾಸಕರೂ ಆಗಿರುವ ಇಕ್ಬಾಲ್ ಹುಸೇನ್ ಮತ್ತೆ ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಡಿಕೆಶಿ, ಮುಖ್ಯಮಂತ್ರಿ ಆಗುವುದು ಖಚಿತ ಎಂದು ಹೇಳಿದ್ದು, ಶೀಘ್ರದಲ್ಲೇ ಮೂರನೇ ಡೇಟ್ ನೀಡುವುದಾಗಿ ಹೇಳಿದ್ದಾರೆ. ಈ ಹಿಂದೆ ಕೊಟ್ಟ ಎರಡು ಡೇಟ್ಸ್ ಮಿಸ್ ಆಗಿರಬಹುದು, ಮೂರನೇ ದಿನಾಂಕ ಸದ್ಯದಲ್ಲೇ ನೀಡುವುದಾಗಿ ಹೇಳಿದ್ದಾರೆ. ಇಕ್ಬಾಲ್ ಹುಸೇನ್ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಯತೀಂದ್ರ ಬಹಿರಂಗ ಹೇಳಿಕೆಯನ್ನು ನೀಡುತ್ತಾರೆ, ಅವರಿಗೆ ಯಾವುದೂ ನೊಟೀಸ್ ಜಾರಿಯಾಗುವುದಿಲ್ಲ. ನಾವು ಏನಾದರೂ ಮಾತನಾಡಿದರೆ ನಮಗೆ ನೊಟೀಸ್ ಜಾರಿ ಮಾಡುತ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್, ಹಲವು ಬಾರಿ ನೋವು ತೋಡಿಕೊಂಡಿದ್ದರು. ಈಗ, ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಹೊಸ ಡೇಟ್’ನೊಂದಿಗೆ ಬರುವುದಾಗಿ ಹೇಳಿದ್ದಾರೆ. “ನಮ್ಮ ನಾಯಕರಾದ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ. ನಮ್ಮೆನ್ನೆಲ್ಲಾ ಆಶೀರ್ವದಿಸುವ ಗುರುಗಳು ಜಪದಲ್ಲಿ ಕೂತಿದ್ದಾರೆ. ಅವರು ನಮಗೆ ದಿನಾಂಕವನ್ನು ನೀಡುತ್ತಾರೆ. ನಾವು ಶೀಘ್ರದಲ್ಲೇ ಮೂರನೇ ಡೇಟ್ ಕೊಡುತ್ತೇವೆ. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ” ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಇವರ ಈ ಹೇಳಿಕೆಯ ಹಿಂದೆ ಏನು ರಹಸ್ಯ ಇರಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಬದಲಾವಣೆಯ ವಿಷಯಕ್ಕೆ ಮತ್ತೆ ಕಿಚ್ಚು ಹಚ್ಚಿದ್ದು ಯಾರು?
ಮುಖ್ಯಮಂತ್ರಿ ಬದಲಾವಣೆಯ ವಿಚಾರ ಆಂತರಿಕವಾಗಿ ಚರ್ಚೆಯಲ್ಲಿದ್ದರೂ, ಬಹಿರಂಗವಾಗಿ ಯಾವ ನಾಯಕರೂ ಹೇಳಿಕೆಯನ್ನು ನೀಡುತ್ತಿರಲಿಲ್ಲ. ಆದರೆ, ಮುಖ್ಯಮಂತ್ರಿಗಳ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಈ ವಿಚಾರದಲ್ಲಿ ನೀಡಿದ ಹೇಳಿಕೆ, ಮತ್ತೆ ಈ ಗೊಂದಲ ಮುನ್ನಲೆಗೆ ಬರುವಂತೆ ಮಾಡಿತು. ಸಿಎಂ ಬದಲಾವಣೆ ಈಗ ಚರ್ಚೆಯ ವಿಷಯವಲ್ಲ, ಅದು ಮುಗಿದ ಅಧ್ಯಾಯ ಎಂದಿದ್ದರು.
ಹೈಕಮಾಂಡ್ ಸಮ್ಮುಖದಲ್ಲಿ ಇದು ನಿರ್ಧಾರವಾಗಿದೆ, ನಮ್ಮ ತಂದೆಯವರೇ ಪೂರ್ಣಾವಧಿಗೆ ಸಿಎಂ ಎಂದು ಹೇಳಿದ್ದರು. ಯತೀಂದ್ರ ಹೇಳಿಕೆ, ಡಿಕೆ ಶಿವಕುಮಾರ್ ಅವರ ಆಪ್ತ ಶಾಸಕರಿಗೆ ಹಿಡಿಸಿರಲಿಲ್ಲ. ಇನ್ನು, ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಹೇಳಿದಂತೆ ನಾವೆಲ್ಲಾ ಕೇಳುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.
ಇದೀಗ ಮತ್ತೆ, ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಿದ್ದು, ಶೀಘ್ರವೇ ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

