ಬೆಂಗಳೂರು, ಜ. 01 : ಈ ವರ್ಷ ಬಾಕಿ ಇರುವ ಎಸ್‌ಐಟಿ, ಸಿಐಡಿ ತನಿಖೆಗಳನ್ನು ಪೂರ್ಣಗೊಳಿಸುತ್ತೇವೆ. ಧರ್ಮಸ್ಥಳ ಪ್ರಕರಣ ಸೇರಿದಂತೆ ಯಾವುದೆಲ್ಲ ಬಾಕಿ ಪ್ರಕರಣ ಇವೆಯೋ ಈ ವರ್ಷ ಪೂರ್ಣಗೊಳಿಸುತ್ತೇವೆ” ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಈ ಬಗ್ಗೆ ಗುರುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ ಆಗುತ್ತದೆ
‘ಮನುಷ್ಯನಿಗೆ ಆಕಾಂಕ್ಷೆ ಎನ್ನುವುದು ಇರಲೇಬೇಕು, ಇಲ್ಲ ಅಂದರೆ ಮನುಷ್ಯ ಅನಿಸಿಕೊಳ್ಳಲ್ಲ. ಎಲ್ಲರಂತೆ ನನಗೂ ಆಕಾಂಕ್ಷೆ ಇದೆ. ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ ಆಗುತ್ತದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸೂಚ್ಯವಾಗಿ ಹೇಳಿದರು. ನಾನು ಇಲ್ಲಿಯವರೆಗೆ ಆಶಾವಾದಿಯಾಗಿಯೇ ಬದುಕಿದ್ದೇನೆ. ಜೀವನದಲ್ಲಿ ಏನೇನೋ ಆಗಬೇಕು ಎಂದು ಬಯಕೆ ಎಲ್ಲರಿಗೂ ಇರುತ್ತದೆ. ಮನುಷ್ಯನಿಗೆ ಆಕಾಂಕ್ಷೆ ಎಂಬುದು ಇರಲೇಬೇಕು. ಹೈಕಮಾಂಡ್ ತೀರ್ಮಾನ ಮಾಡಿದರೆ ಆಗುತ್ತದೆ. ಅದು ನಮ್ಮ ವರಿಷ್ಠರಿಗೆ ಬಿಟ್ಟದ್ದು ಎಂದು ತಿಳಿಸಿದರು.

