ಪುತ್ತೂರು, ಡಿ. 04 : ಕಬಕ ಗ್ರಾಮದ ಮುರ ಪ್ರದೇಶದಲ್ಲಿರುವ ರೈಲ್ವೇ ಸೇತುವೆ ಬಳಿ ಆರೋಪಿತ ವ್ಯಕ್ತಿ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆತನಿಂದ 10 ಗ್ರಾಂ ಎಂಡಿಎಂಎ ನಿಷೇಧಿತ ಮಾದಕವಸ್ತು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ. ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ (41) ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯ ಕಲಂ 8(C), 22(b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ರೈಲ್ವೇ ಸೇತುವೆ ಬಳಿ ವ್ಯಕ್ತಿಯೋರ್ವ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಎಂಬ ನಿಖರ ಮಾಹಿತಿಯ ಮೇರೆಗೆ, ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಶಂಕಿತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಹಾಗೂ ಆತನ ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ, ಮಾರಾಟ ಉದ್ದೇಶಕ್ಕಾಗಿ ಅಕ್ರಮವಾಗಿ ಇಟ್ಟುಕೊಂಡಿದ್ದ 10 ಗ್ರಾಂ ಎಂಡಿಎಂಎ ನಿಷೇಧಿತ ಮಾದಕವಸ್ತು ಪತ್ತೆಯಾಗಿದೆ ಎನ್ನಲಾಗಿದೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಯ ವಿರುದ್ಧ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ 6 ಬೇರೆ ಪ್ರಕರಣಗಳು ದಾಖಲಾಗಿರುವುದು ಬಹಿರಂಗವಾಗಿದೆ.

