ಬೆಂಗಳೂರು : ಸಿದ್ದು ಸರ್ಕಾರ ಪ್ರಬಲವಾಗಿ ವಿರೋಧಿಸಿದ್ದ, ಜಿ ರಾಮ್ ಜಿ ಯೋಜನೆ ಜಾರಿಗೆ ಡಿಕೆಶಿ ಸರ್ಕಾರ ಇಂಗಿತ !

ಬೆಂಗಳೂರು, ಜೂ. 10 : ಮನರೇಗಾ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ‘ವಿಬಿ ಜಿ ರಾಮ್ ಜಿ’ ಯೋಜನೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡಿದ್ದ ಹಾಗೂ ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರವು ಈಗ ಅನಿವಾರ್ಯವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಇಂಗಿತ ವ್ಯಕ್ತಪಡಿಸಿದೆ.

Advertisement

ಜಿರಾಮ್ ಜಿ ಯೋಜನೆಗೆ ಸಂಬಂಧಪಟ್ಟಂತೆ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಜತೆಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ನಡೆಸಿದ ವಿಡಿಯೋ ಕಾನ್ವರೆನ್ಸ್ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ, ಯೋಜನೆ ಅನುಷ್ಠಾನ ಸಂಬಂಧ ಹಣಕಾಸು ಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.


ಈ ವರ್ಷ ಜುಲೈ 1ರಿಂದ ಜಾರಿಯಾಗಬೇಕಿರುವ ವಿಬಿ ಜಿರಾಮ್ ಜಿ ಅಡಿಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 60:40ರ ಅನುಪಾತದಲ್ಲಿ 5709.90 ಕೋಟಿ ರೂ. ಮಧ್ಯಂತರ ಅನುದಾನ ಹಂಚಿಕೆ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾರ 40ರ ಅನುಪಾತದಲ್ಲಿ 3806.60 ಕೋಟಿ ರೂ. ಪಾಲು ನೀಡಬೇಕಾಗಿದೆ. ಹೀಗಾಗಿ ಈ ಯೋಜನೆ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಬೆಲೆ ಏರಿಕೆ ಸರಿದೂಗಿಸಲು ರಾಜ್ಯ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಲು ತೀರ್ಮಾನಿಸಿದ್ದು ಈ ಹಿಂದಿನ ಮನರೇಗಾದ ಹೊಸ ರೂಪವಾದ ವಿಬಿ ಜಿ ರಾಮ್ ಜಿ ಕನಿಷ್ಠ ವೇತನವನ್ನೂ ಹೆಚ್ಚಿಸಬೇಕು. ಜತೆಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಣ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆ ಯುಪಿಎ ಅಧಿಕಾರಾವಧಿಯಲ್ಲಿ ಅನುಷ್ಠಾನಕ್ಕೆ ತಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮನರೇಗಾವನ್ನು ರಾಜ್ಯ ಸರ್ಕಾರ ಅತ್ಯಂತ ಯಶಸ್ವಿಯಾಗಿ ಜಾರಿ ಮಾಡಿದ್ದು ಗ್ರಾಮೀಣ ಭೂರಹಿತ ಕೂಲಿ ಕಾರ್ಮಿಕರು, ರೈತರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರಿಗೆ ಒಳಿತಾಗುವ ರೀತಿಯಲ್ಲಿ ಹಾಗೂ ಗ್ರಾಮೀಣ ಜನರ ಬದುಕು ಹಸನಾಗಿಸಲು ಶ್ರಮಿಸಲಾಗುವುದು ಎಂದಿದ್ದಾರೆ.

ಪ್ರಬಲ ವಿರೋಧ:


ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ಮನರೇಗಾ) ರದ್ದುಪಡಿಸಿ ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದಾಗ ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಸರ್ಕಾರಗಳು ಪ್ರಬಲವಾಗಿ ವಿರೋಧಿಸಿದ್ದವು. ಅದರಲ್ಲೂ ವಿಶೇಷವಾಗಿ ಕರ್ನಾಟಕ ಸರ್ಕಾರ ಕೇಂದ್ರದ ವಿರುದ್ಧ ದೇಶವ್ಯಾಪಿ ಚಳವಳಿ ರೂಪಿಸುವುದಾಗಿ ಘೋಷಿಸಿದ್ದು ಮಾತ್ರವಲ್ಲ ಕಾನೂನು ಹೋರಾಟ ಮಾಡುವುದಾಗಿಯೂ ಹೇಳಿತ್ತು.

ಬಡವರ ಬದುಕಿನ ಹಕ್ಕು ಕಸಿದುಕೊಂಡಿದೆ, ಕೇಂದ್ರ ಸರ್ಕಾರ ಬಡವರ ವಿರೋಧಿ ನಿಲುವು ತೆಗೆದುಕೊಂಡಿದೆ ಎಂದು ಕಿಡಿ ಕಾರಿತ್ತು. ಪ್ರತಿಯಾಗಿ ಯೋಜನೆಯ ಅನುಷ್ಠಾನದಲ್ಲಿ ಸಾಕಷ್ಟು ಹಣ ದುರ್ಬಳಕೆ, ಅವ್ಯವಹಾರಗಳಿಗೆ ಕಾರಣವಾಗುತ್ತಿದೆ, ಕಾಮಗಾರಿ ನಡೆಸದೆ ಹಣ ಪಡೆಯಲಾಗಿದೆ. ಕಾರ್ಮಿಕರನ್ನು ಬಳಸದೆ ಯಂತ್ರಗಳ ಮೂಲಕ ಕೆಲಸ ಮಾಡಿ ಬಿಲ್ ಪಡೆಯಲಾಗಿದೆ. ಹೀಗಾಗಿ ಅವ್ಯವಹಾರ ತಡೆಯಲು ಯೋಜನೆಗೆ ಹೊಸ ರೂಪ ಕೊಡಲಾಗಿದೆ ಎಂದು ಬಿಜೆಪಿಗರು ಸಮರ್ಥಿಸಿಕೊಂಡಿದ್ದರು. ಈ ಸಂಬಂಧ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ತೀವ್ರ ವಾಕ್ಸಮರ ನಡೆದು ಅಂತಿಮವಾಗಿ ಗದ್ದಲದಲ್ಲಿಯೇ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಕೂಡ ಅಂಗೀಕರಿಸಲಾಗಿತ್ತು.

ಜೂ. 28 ಹಾಗೂ 29ರಂದು ನವದೆಹಲಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನದ ಬಗ್ಗೆ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆ ಕರೆಯಲಾಗಿದ್ದು ಈ ಸಭೆಯಲ್ಲಿ ಭಾಗಿಯಾಗಿ, ರಾಜ್ಯದ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಕ್ಷೇತ್ರ ಸಮಿತಿ ಬೆಳ್ತಂಗಡಿ ವತಿಯಿಂದ “ಆಟಿದ ಕಮ್ಮೆನ ಬೊಕ್ಕಗೊಬ್ಬು”

ಟಾಪ್ ಸುದ್ದಿಗಳು, ವಿದೇಶ

ಟೋಕಿಯೋ : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

⚠️ Contents are protected on this website.