ಹಾಂಕಾಂಗ್ : ಹಾಂಕಾಂಗ್‌ನ ತೈ ಪೊ ಜಿಲ್ಲೆಯ ವಾಗ್ ಫುಕ್ ಕೋರ್ಟ್ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಕಟ್ಟಡದ ನವೀಕರಣ ಕಾಮಗಾರಿಯಲ್ಲಿದ್ದ 8 ಮಂದಿಯನ್ನು ಹಾಂಕಾಂಗ್‌ನ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
128 ಮಂದಿ ಬಲಿ ಪಡೆದ ಭೀಕರ ಅಗ್ನಿ ಅವಘಡಕ್ಕೆ ಕಾರಣರಾಗಿದ್ದಾರೆಂದು ಆರೋಪಿಸಿ 40 ರಿಂದ 63 ವರ್ಷ ವಯಸ್ಸಿನ 7 ಪುರುಷರು ಮತ್ತು ಒಬ್ಬ ಮಹಿಳೆಯನ್ನು ಒಳಗೊಂಡ ಸ್ಕ್ಯಾಫೋಲ್ಡಿಂಗ್ ಗುತ್ತಿಗೆದಾರರು, ಎಂಜಿನಿಯರಿಂಗ್ ಸಲಹಾ ಸಂಸ್ಥೆಯ ನಿರ್ದೇಶಕರು ಮತ್ತು ಯೋಜನಾ ವ್ಯವಸ್ಥಾಪಕರ ಬಂಧನಕ್ಕೊಳಗಾಗಿದ್ದಾರೆ. ಘಟನೆ ಬಳಿಕ ತನಿಖೆ ವೇಳೆ ಬಂಧಿತರ ಕಚೇರಿಗಳ ಮೇಲೆ ದಾಳಿ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಬ್ಯಾಂಕ್ ವಿವರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಟ್ಟಡದ ಹೊರಗೆ ಅಳವಡಿಸಲಾಗಿದ್ದ ಸ್ಟೈರೋಫೋಮ್ ಮತ್ತು ಇತರ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದಾಗಿ ಬೆಂಕಿ ವೇಗವಾಗಿ ಹರಡಿತು. ಅಲ್ಲದೆ, ಎಂಟು ಕಟ್ಟಡಗಳ ಅಗ್ನಿ ಅಲಾರಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಬೆಂಕಿ ಹೊತ್ತಿಕೊಂಡಾಗ ಅಲಾರಂ ಕೇಳಿಸಿರಲಿಲ್ಲ, ಹಾಗಾಗಿ ಅಲ್ಲಿ ಕಾರ್ಯ ನಿರ್ವಹಿಸುವವರು ಸೇರಿದಂತೆ ನವೀಕರಣ ಕಾರ್ಯ ನಿರ್ವಹಿಸುತ್ತಿದ್ದವರ ನಿರ್ಲಕ್ಷದಿಂದಾಗಿ ಅವಘಡ ಸಂಭವಿಸಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಸಿಗರೇಟಿನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಅನುಮಾನಗಳು ಮೂಡುತ್ತಿದ್ದು, ಘಟನೆಗೂ ಕೆಲವೇ ಕ್ಷಣಗಳ ಹಿಂದೆ ಒಬ್ಬ ವ್ಯಕ್ತಿ ಅದೇ ಕಟ್ಟದಲ್ಲಿ ಕುಳಿತು ಸಿಗರೇಟ್ ಸೇದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವ್ಯಕ್ತಿ ಅಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಅಧಿಕಾರಿಗಳು ಈವರೆಗೂ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ತನಿಖೆಯಿಂದಷ್ಟೇ ಸತ್ಯ ಸಂಗತಿ ಹೊರಬರಬೇಕಿದೆ.
60 ವರ್ಷಗಳ ನಂತರ ನಡೆದ ಭೀಕರ ಅಪಘಾತ
ಬುಧವಾರ ಹಾಂಕಾಂಗ್ ನಲ್ಲಿ ನಡೆದ ಭೀಕರ ಅಗ್ನಿಅವಘಡದಲ್ಲಿ ಸುಮಾರು 128 ಮಂದಿ ಸಾವನ್ನಪ್ಪಿದರೆ, 80 ಮಂದಿ ಗಾಯಗೊಂಡಿದ್ದಾರೆ. ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಇನ್ನು,ಇದು ಚೀನಾದ ಇತಿಹಾಸದಲ್ಲೇ ಸುಮಾರು 60 ವರ್ಷಗಳ ನಂತರ ನಡೆದ ಭೀಕರ ಅವಘಡ ಎಂದು ತಿಳಿದುಬಂದಿದೆ. ಈ ಹಿಂದೆ 1962 ರಂದು ಕೌಲೂನ್‌ನ ಶಾಮ್ ಶೂಯಿ ಪೊನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 44 ಜನರು ಸಾವನ್ನಪ್ಪಿದ್ದರು. ಇದಕ್ಕೂ ಮೊದಲು 1948 ರಂದು ಗೋದಾಮಿನಲ್ಲಿ ಸಂಭವಿಸಿದ ಬೆಂಕಿಯಲ್ಲಿ 176 ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.

