ಪದ್ಮುಂಜ, ಫೆ. 11 : ಕಾರ್ಯಕ್ರಮವೊಂದಕ್ಕೆ ತೆರಳುತ್ತಿರುವ ಸಂದರ್ಭ ರಸ್ತೆ ಮಧ್ಯೆ ಅಪಘಾತಕ್ಕೀಡಾದ ಯುವಕನನ್ನು ವಿಚಾರಿಸಿ, ಆಸ್ಪತ್ರೆಗೆ ತಲುಪಿಸುವಲ್ಲಿ ತುರ್ತು ಸ್ಪಂದಿಸಿ ಶಾಸಕ ಹರೀಶ್ ಪೂಂಜಾ ಅವರು ಮಾನವೀಯತೆ ಮೆರೆದಿದ್ದಾರೆ.
ಬೆಳಾಲಿನ ಆರಿಕೋಡಿ ದೇವಸ್ಥಾನದ ಕಾರ್ಯಕ್ರಮ ಮುಗಿಸಿ, ಬೇರೊಂದು ಕಾರ್ಯಕ್ರಮಕ್ಕೆ ತೆರಳುವ ಸಂದರ್ಭ ಬಂದಾರು-ಕುಪ್ಪೆಟ್ಟಿ ಮುಖ್ಯ ರಸ್ತೆಯ ಪದ್ಮುಂಜ ಬಳಿ ಬೈಕ್ ಅಪಘಾತಕ್ಕೊಳಗಾಗಿ ಯುವಕನೋರ್ವ ರಸ್ತೆಯಲ್ಲಿ ಬಿದ್ದಿದ್ದ. ಆತನನ್ನು ಕಂಡ ತಕ್ಷಣವೇ ಶಾಸಕ ಹರೀಶ್ ಪೂಂಜಾ ಅವರು ಕಾರು ನಿಲ್ಲಿಸಿ, ತುರ್ತಾಗಿ ಸ್ಪಂದಿಸಿದ್ದಾರೆ. ಸ್ಥಳದಲ್ಲಿ ಯುವಕನನ್ನು ತುರ್ತಾಗಿ ವಿಚಾರಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ. ಶಾಸಕರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

