“ಮನೆಯಲ್ಲೇ ಕುಳಿತು ಕೈತುಂಬಾ ಸಂಪಾದಿಸಿ” ಎಂದು ನೂರಾರು ಮಹಿಳೆಯರಿಗೆ ಪಂಗನಾಮ – ಕೋಟ್ಯಾಂತರ ರೂ. ದೋಚಿ ಪರಾರಿ !

ಹಾವೇರಿ, ಜೂ. 10: “ಮನೆಯಲ್ಲೇ ಕುಳಿತು ಕೈತುಂಬಾ ಸಂಪಾದಿಸಿ” ಎಂಬ ಆಕರ್ಷಕ ಜಾಹೀರಾತುಗಳನ್ನು ನಂಬಿದ ನೂರಾರು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಭಾರಿ ವಂಚನೆಯಾಗಿರುವ ಆಘಾತಕಾರಿ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ಹಾವೇರಿಯ ಅಶ್ವಿನಿ ನಗರದಲ್ಲಿರುವ ‘SLV ಮಹಿಳಾ ಮಾರ್ಟ್’ ಎಂಬ ಹೆಸರಿನ ಕಂಪನಿಯು ಸ್ವಯಂ ಉದ್ಯೋಗ ನೀಡುವ ಆಸೆ ತೋರಿಸಿ, ರಾಜ್ಯದ ಮೂಲೆ ಮೂಲೆಗಳಿಂದ ಬಂದ ಜನರಿಂದ ಬರೋಬ್ಬರಿ 5 ರಿಂದ 10 ಕೋಟಿ ರೂಪಾಯಿ ಹಣವನ್ನು ದೋಚಿ ರಾತ್ರೋರಾತ್ರಿ ಪರಾರಿಯಾಗಿದೆ.

Advertisement

ವಿನಾಯಕ ಆನ್ವೇರಿ ಹಾಗೂ ರಮ್ಯ ಎಂಬುವವರು ಈ SLV ಮಹಿಳಾ ಮಾರ್ಟ್ ಕಂಪನಿಯ ಮಾಲೀಕರಾಗಿದ್ದು, “ಮನೆಯಲ್ಲೇ ಕುಳಿತು ಅಗರಬತ್ತಿ, ಕಸಬರಗಿ (ರೊಟ್ಟಿ ಕಸಬರಗಿ) ಹಾಗೂ ಮೇಣದಬತ್ತಿಗಳನ್ನು ಪ್ಯಾಕ್ ಮಾಡುವ ಗೃಹ ಕೆಲಸ ನೀಡುತ್ತೇವೆ. ಇದಕ್ಕೆ ಲಕ್ಷ ಲಕ್ಷ ಬಂಡವಾಳ ಹೂಡಿಕೆ ಮಾಡಬೇಕು” ಎಂದು ಈ ವಂಚಕರು ನಂಬಿಸಿದ್ದರು. ಆರಂಭದ ಒಂದೆರಡು ತಿಂಗಳು ಹೂಡಿಕೆ ಮಾಡಿದವರಿಗೆ ಸರಿಯಾಗಿ ಹಣ ಹಾಗೂ ಕಮಿಷನ್ ನೀಡುವ ನಾಟಕವಾಡಿ ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಿದ್ದರು.

ಕಂಪನಿಯ ನಂಬಿಕೆ ಹೆಚ್ಚಾಗುತ್ತಿದ್ದಂತೆ ಹಾವೇರಿ ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ನೂರಾರು ಮಹಿಳೆಯರು ಲಕ್ಷಾಂತರ ರೂಪಾಯಿ ಹಣವನ್ನು ತಂದು ಹೂಡಿಕೆ ಮಾಡಿದ್ದಾರೆ. ಹೀಗೆ ಒಟ್ಟಾರೆ ಅಂದಾಜು 5 ರಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುತ್ತಿದ್ದಂತೆಯೇ ಮಾಲೀಕರಾದ ವಿನಾಯಕ ಮತ್ತು ರಮ್ಯ ಕಂಪನಿಗೆ ಬೀಗ ಜಡಿದು ರಾತ್ರೋರಾತ್ರಿ ನಾಪತ್ತೆಯಾಗಿದ್ದಾರೆ. ಇತ್ತ ತಾವು ಕಷ್ಟಪಟ್ಟು ಹೂಡಿಕೆ ಮಾಡಿದ ಅಸಲು ಹಣವೂ ಸಿಗದೆ, ಇತ್ತ ಕೆಲಸ ಮಾಡಿದ ಕೂಲಿಯೂ ಸಿಗದೆ ನೂರಾರು ಮಹಿಳೆಯರು ಬೀದಿಗೆ ಬಿದ್ದಿದ್ದಾರೆ.

ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ನೂರಾರು ಮಹಿಳೆಯರು ಹಾವೇರಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವಂಚಕ ಕಂಪನಿ ಹಾಗೂ ಅದರ ಮಾಲೀಕರ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಕಣ್ಣೀರು ಹಾಕುತ್ತಲೇ SLV ಮಹಿಳಾ ಮಾರ್ಟ್ ಕಂಪನಿಗೆ ಹಿಡಿಶಾಪ ಹಾಕುತ್ತಿರುವ ನೊಂದ ಮಹಿಳೆಯರು, “ನಮ್ಮ ಜೀವಮಾನದ ಉಳಿತಾಯದ ಹಣವನ್ನು ನಂಬಿಸಿ ದೋಚಿದ್ದಾರೆ. ಪೊಲೀಸರು ತಕ್ಷಣವೇ ಆ ಮೋಸಗಾರರನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಬೇಕು ಮತ್ತು ನಮ್ಮ ಹಣವನ್ನು ವಾಪಸ್ ಕೊಡಿಸಬೇಕು” ಎಂದು ಒತ್ತಾಯಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಜಾಹೀರಾತು ನಂಬುವ ಮುನ್ನ ಎಚ್ಚರ !

ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡಾ ಇಂತಹ ಹಲವಾರು ಜಾಹೀರಾತುಗಳು ಕಾಣಸಿಗುತ್ತವೆ. ಮನೆಯಿಂದಲೇ ಕೆಲಸ ಮಾಡಿ ಸಂಪಾದಿಸಿ ಎನ್ನುವ ಜಾಹೀರಾತುಗಳನ್ನು ನಂಬುವ ಮುನ್ನ ಎಚ್ಚರಿಕೆ ವಹಿಸಬೇಕಾಗಿದೆ. ಕೆಲವೊಂದಿಷ್ಟು ಮಂದಿ ಹೂಡಿಕೆ ಮಾಡುವ ಅಗತ್ಯವಿಲ್ಲವೆಂದು ಹೇಳಿಕೊಂಡು ವಂಚಿಸುವವರೂ ಇದ್ದಾರೆ. ಹೀಗಾಗಿ ಯಾವುದೇ ನಕಲಿ ಜಾಹೀರಾತು ಅಥವಾ ಅಪರಿಚಿತ ವ್ಯಕ್ತಿಗಳ ಬಗ್ಗೆ ಅಪರಿಚಿತ ಕಂಪೆನಿಗಳ ಬಗ್ಗೆ ಎಚ್ಚರಿಕೆ ಅತ್ಯಗತ್ಯವಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.