ಇಸ್ಲಾಮಬಾದ್ : ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಜಿಲ್ಲಾ ನ್ಯಾಯಾಲಯದ ಹೊರಭಾಗದಲ್ಲಿ ನ.11ರಂದು ನಡೆದ ಕಾರ್ ಬಾಂಬ್ ಸ್ಫೋಟದ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನಿ ಹೊತ್ತುಕೊಂಡಿದೆ. ಈ ಬಾಂಬ್ ಸ್ಪೋಟದಲ್ಲಿ ಸುಮಾರು 12 ಮಂದಿ ಮೃತಪಟ್ಟಿದ್ದರು, 20 ಮಂದಿ ಗಾಯಗೊಂಡಿದ್ದರು. ದೇಶದಲ್ಲಿ ಇಸ್ಲಾಮಿಕ್ ಕಾನೂನು ಜಾರಿಯಾಗುವವರೆಗೂ ಹೆಚ್ಚಿನ ದಾಳಿಗಳನ್ನು ನಡೆಸುವುದಾಗಿ ಪಾಕಿಸ್ತಾನಿ ತಾಲಿಬಾನಿ ಬೆದರಿಕೆ ಹಾಕಿದೆ.
“ನಮ್ಮ ಹೋರಾಟಗಾರರು ಇಸ್ಲಾಮಾಬಾದ್‌ನಲ್ಲಿರುವ ನ್ಯಾಯಾಂಗ ಆಯೋಗದ ಮೇಲೆ ದಾಳಿ ನಡೆಸಿದರು. ಪಾಕಿಸ್ತಾನದ ಇಸ್ಲಾಮಿಕ್ ಅಲ್ಲದ ಕಾನೂನುಗಳ ಅಡಿಯಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು, ವಕೀಲರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಿ ಈ ಆತ್ಮಾಹುತಿ ದಾಳಿಗಳನ್ನು ನಡೆಸಲಾಗಿದೆ. ದೇಶದಲ್ಲಿ ಇಸ್ಲಾಮಿಕ್ ಕಾನೂನು ಜಾರಿಯಾಗುವವರೆಗೂ ಇಂತಹ ಭೀಕರ ದಾಳಿಗಳು ಮುಂದುವರಿಯಲಿವೆ ಎಂದು ಪಾಕ್ ಸರ್ಕಾರಕ್ಕೆ ಪಾಕಿಸ್ತಾನಿ ತಾಲಿಬಾನಿಗಳು ಎಚ್ಚರಿಕೆ ನೀಡಿದ್ದಾರೆ.
ಆತ್ಮಾಹುತಿ ದಾಳಿ ಎಚ್ಚರಿಕೆಯ ಕರೆ ಎಂದ ಖವಾಜ ಆಸೀಫ್
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸೀಫ್ ಈ ಆತ್ಮಾಹುತಿ ದಾಳಿಯನ್ನು “ಎಚ್ಚರಿಕೆಯ ಕರೆ” ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಈ ಪರಿಸ್ಥಿತಿಯಲ್ಲಿ, ಕಾಬೂಲ್ ಆಡಳಿತಗಾರರೊಂದಿಗೆ ಯಶಸ್ವಿ ಮಾತುಕತೆಗಳ ಬಗ್ಗೆ ಹೆಚ್ಚಿನ ಭರವಸೆ ಇಟ್ಟುಕೊಳ್ಳುವುದು ವ್ಯರ್ಥ ಎಂದು ಬರೆದುಕೊಂಡಿದ್ದರು.
ಇದರ ನಡುವೆಯೇ ಪಾಕಿಸ್ತಾನದಲ್ಲಿ ನಡೆದ ದಾಳಿಯ ಹೊಣೆಯನ್ನು ಭಾರತದ ಮೇಲೆ ಹೊರಿಸಲು ಸಹ ಪಾಕಿಸ್ತಾನ ಪ್ರಯತ್ನಿಸಿತ್ತಾದರೂ ಭಾರತದ ಈ ಎಲ್ಲಾ ಆರೋಪಗಳು ಆಧಾರರಹಿತ ಮತ್ತು ಹುಸಿಯಾಗಿದೆ ಎಂದು ಸ್ಪಷ್ಟಪಡಿಸಿದೆ. ಈಗ ಈ ಆತ್ಮಾಹುತಿ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನಿಗಳು ಹೊತ್ತುಕೊಂಡಿದ್ದು, ಈಗಾಗಲೇ ಒಳ ಸಂಘರ್ಷ ಹಾಗೂ ಅಫ್ಘಾನಿಸ್ತಾನದ ನಡುವಿನ ಯುದ್ದ ಇದರಿಂದ ತತ್ತರಿಸಿರುವ ಪಾಕಿಗಳಿಗೆ ಇನ್ನೊಂದು ಸವಾಲು ಎದುರಾಗಿದೆ.

