ಕಾರ್ಕಳ : ತಾಲೂಕಿನ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜನಿವಾರ, ಕೈಗೆ ಕಟ್ಟಿದ ನೂಲುಗಳನ್ನು ಬಲತ್ಕಾರವಾಗಿ ತೆಗೆಸಿದ ಆರೋಪದ ಮೇರೆಗೆ ದೈಹಿಕ ಶಿಕ್ಷಕನನ್ನು ಕರ್ತವ್ಯವದಿಂದ ವಜಾಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂಲತಃ ಕಲಬುರಗಿ ನಿವಾಸಿ, ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ವಜಾಗೊಂಡ ಶಿಕ್ಷಕ ಎಂದು ತಿಳಿದು ಬಂದಿದೆ.
ಮಿಯ್ಯಾರಿನ ಮೊರಾರ್ಜಿ ದೇಸಾಯಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಕಾಂದರ್ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸುವುದು, ಜನಿವಾರ ಮತ್ತು ಕೈಗೆ ಕಟ್ಟಿರುವ ದಾರ ತೆಗೆಯುವಂತೆ ಒತ್ತಡ ಹೇರಿದ್ದಾರೆಂದು ಮಕ್ಕಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಕ್ಕಳ ದೂರಿನ ಮೇರೆಗೆ ಪೋಷಕರು, ಊರವರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಮಕಾಂದಾರ್‌ಗೆ ಈ ಬಗ್ಗೆ ಈ ಮೊದಲು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಇದೇ ಪ್ರವೃತ್ತಿ ಮುಂದುವರಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಮಕಾಂದರ್‌ನನ್ನು ಪ್ರಾಂಶುಪಾಲರು ಶಾಲಾ ಕರ್ತವ್ಯದಿಂದ ವಜಾಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು, ಮಿಯ್ಯಾರಿನ ಮೊರಾರ್ಜಿ ದೇಸಾಯಿ ಶಾಲೆಯು ಉತ್ತಮ ಫಲಿತಾಂಶವನ್ನೇ ಹೊಂದಿದ್ದು, ಬೇರೆ ಬೇರೆ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

