ಕಲ್ಮಂಜ, ಫೆ. 10 : ಧರ್ಮಸ್ಥಳ ಮುಂಡಾಜೆ ಸಂಪರ್ಕ ರಸ್ತೆಯ, ಕಲ್ಮಂಜ ಗ್ರಾಮದ ಕೊತ್ತಲಿಗೆ ಎಂಬಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜಾ ಅವರು ಇಂದು ಶಿಲನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿಷ್ಪಕ್ಷಪಾತವಾಗಿ ಶ್ರಮ ವಹಿಸುತ್ತಿದ್ದೇನೆ. ಧರ್ಮಸ್ಥಳ ಮುಂಡಾಜೆ ರಸ್ತೆಯು ಅತ್ಯಂತ ಪ್ರಮುಖ ರಸ್ತೆಗಳಲ್ಲೊಂದಾಗಿದ್ದು, ಈಗಾಗಲೇ 3 ನೂತನ ಸೇತುವೆ ನಿರ್ಮಾಣಕ್ಕೆ ರೂ. 3.75 ಕೋಟಿ ಅನುದಾನ ಮೀಸಲಿರಿಸಿ, ಶಿಲನ್ಯಾಸ ನೆರವೇರಿಸಲಾಗಿದೆ. ಆದಷ್ಟು ಶೀಘ್ರವೇ ನೂತನ ಸೇತುವೆಗಳ ನಿರ್ಮಾಣವಾಗುತ್ತದೆ ಎಂದು ಭರವಸೆ ನೀಡಿದರು. ಸೇತುವೆ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಸ್ಥಳೀಯರು ಸಂಪೂರ್ಣ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಥಳೀಯರಾದ ಶ್ರೀನಿವಾಸ್ ರಾವ್ ಅವರು, ಶಾಸಕರು ಗ್ರಾಮಸ್ಥರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸುತ್ತಿದ್ದಾರೆ. ಮುಂಡಾಜೆ ಹಾಗೂ ಕಲ್ಮಂಜ ಗ್ರಾಮಸ್ಥರ ಬಹುಬೇಡಿಕೆಯ ಮೂರು ಸೇತುವೆಗಳನ್ನು ಅಭಿವೃದ್ಧಿಗೊಳಿಸುತ್ತಿರುವುದು ಸಂತಸ ತಂದಿದೆ. ಅಲ್ಲದೆ, ಎರಡು ಭಾಗವಾಗಿದ್ದ ಕಲ್ಮಂಜ ಗ್ರಾಮವನ್ನು ಪಜಿರಡ್ಕದಲ್ಲಿ ಕಿಂಡಿ ಅಣೆಕಟ್ಟು ಸಹಿತ ಬೃಹತ್ ಸೇತುವೆ ನಿರ್ಮಾಣದ ಮೂಲಕ ಒಂದು ಮಾಡಿದ್ದಾರೆ. ತಾಲೂಕಿನ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಇಂತಹ ಶಾಸಕರನ್ನು ಪಡೆದ ನಾವೇ ಪುಣ್ಯವಂತರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ ಆರ್. ಸಾಲ್ಯಾನ್, ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ವಿಮಲ, ಗ್ರಾ ಕಾರ್ಯದರ್ಶಿ ಸರೋಜಿನಿ, ಗ್ರಾಮ ಪಂಚಾಯತ್ ಸದಸ್ಯರು, ಬೂತ್ ಬಿಜೆಪಿ ಅಧ್ಯಕ್ಷರಾದ ಅನಿಲ್ ಗೌಡ, ಸ್ಥಳೀಯರಾದ ವೆಂಕಟ್ರಮಣ ಹೆಬ್ಬಾರ್, ಶ್ರೀನಿವಾಸ್ ರಾವ್, ದೇವಪ್ಪ ಆಚಾರಿ, ಪ್ರದೀಪ್ ಚಿಪ್ಳೂಣ್ ಕರ್, ಇಂಜಿನಿಯರ್, ಗುತ್ತಿಗೆದಾರರು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
3 ನೂತನ ಸೇತುವೆ ನಿರ್ಮಾಣಕ್ಕೆ ರೂ. 3.75 ಕೋಟಿ ಅನುದಾನ
ಧರ್ಮಸ್ಥಳ-ಮುಂಡಾಜೆ ಸಂಪರ್ಕ ರಸ್ತೆಯ ಕಲ್ಮಂಜ ಗ್ರಾಮದ ಕೊತ್ತಲಿಗೆ, ಒಂಜರೆಬೈಲು ಹಾಗೂ ಪಿಲತ್ತಡ್ಕದಲ್ಲಿ ಒಟ್ಟು 3 ನೂತನ ಸೇತುವೆ ನಿರ್ಮಾಣಕ್ಕೆ ರೂ. 3.75 ಅನುದಾನವನ್ನು ಒದಗಿಸಿ, ಇಂದು ಮೂರೂ ಸೇತುವೆ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜಾ ಅವರು ಶಿಲನ್ಯಾಸ ನೆರವೇರಿಸಿದ್ದಾರೆ.

