ಕಾರ್ಕಳ : ಪುರಸಭಾ ವ್ಯಾಪ್ತಿಯ ಹಲವೆಡೆ ಡಿವೈಡರ್‌ಗೆ ಅಳವಡಿಸಿದ ಬೀದಿದೀಪಗಳು ಉರಿಯದೇ ನಗರವನ್ನು ಕತ್ತಲ ಕೂಪಕ್ಕೆ ದೂಡಿದಂತಾಗಿದೆ. ಬಂಗ್ಲೆಗುಡ್ಡೆಯಿಂದ ಗ್ಯಾಲಕ್ಸಿಯವರೆಗೆ ಹಾಗೂ ತಾಲೂಕು ಕಚೇರಿಯ ಮುಂಭಾಗದಲ್ಲಿರುವ ಡಿವೈಡರ್‌ನಲ್ಲಿ ಒಟ್ಟು 73 ದೀಪಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಸುಮಾರು 40 ದೀಪಗಳು ಉರಿಯುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂ. ಅನುದಾನದಿಂದ ಅಳವಡಿಸಿದ ದೀಪಗಳು ಪ್ರಯೋಜನವಿಲ್ಲದಂತಾಗಿದೆ. ರಾತ್ರಿ ವೇಳೆ ಪಾದಚಾರಿಗಳು, ದ್ವಿಚಕ್ರ ಸವಾರರು ಹಾಗೂ ವಾಹನ ಚಾಲಕರ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಸಮರ್ಪಕವಾದ ನಿರ್ವಹಣೆ ಇಲ್ಲದೆ ಬೀದಿದೀಪಗಳು ಇದೀಗ ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವ ಪರಿಸ್ಥಿತಿಯನ್ನು ಎದುರಿಸುತ್ತಿದೆ.
10 ವರ್ಷಗಳ ಹಿಂದೆ ಈ ದೀಪಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಬೀದಿದೀಪಗಳ ಸರಿಯಾದ ನಿರ್ವಹಣೆ ಇಲ್ಲದಿರುವುದು ವಿಷಾದನೀಯ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಜನಪ್ರತಿನಿಧಿಗಳು ಸರಕಾರದಿಂದ ಅನುದಾನ ತರಿಸಿ ಯೋಜನೆ ಅನುಷ್ಠಾನಗೊಳಿಸಿದರೂ ಸ್ಥಳೀಯಾಡಳಿತ ಅದರ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ಆರೋಪ ಕೂಡಾ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

