ಕಾರ್ಕಳ ನಗರದಲ್ಲಿ ಬೀದಿ ನಾಯಿಗಳದ್ದೇ ಅಟ್ಟಹಾಸ – ಆಡಳಿತ ವ್ಯವಸ್ಥೆ ಗಪ್ ಚುಪ್ !

ಕಾರ್ಕಳ, ಜ. 22 : ನಗರದ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಾಯಿ ಕಡಿತ ಪ್ರಕರಣಗಳೂ ಕೂಡಾ ದಾಖಲಾಗುತ್ತಲೇ ಇದೆ. ಬೀದಿ ನಾಯಿಗಳ ಕಾಟದಿಂದಾಗಿ ವಾಹನ ಸವಾರರೂ ಕೂಡಾ ಪರದಾಡುವಂತಾಗಿದೆ. ಹಿಂಡು ಹಿಂಡಾಗಿ ನಾಯಿಗಳು ಅಡ್ಡಾ-ದಿಡ್ಡಿಯಾಗಿ ಓಡಾಡುವುದರಿಂದ ವಾಹನ ಸವಾರರಿಗೂ ಹಾಗೂ ಪಾದಚಾರಿಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೂ ಕೂಡಾ ಸಂಬಂಧ ಪಟ್ಟ ಅಧಿಕಾರಿಗಳು, ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ನಾಯಿಗಳ ಉಪಟಳದಿಂದಾಗಿ ವಿದ್ಯಾರ್ಥಿಗಳು ಕೂಡಾ ರಸ್ತೆ ಬದಿಯಲ್ಲಿ ನಡೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ದ್ವಿ ಚಕ್ರ ವಾಹನ ಸವಾರರನ್ನು ಅಟ್ಟಾಡಿಸುವುದರಿಂದ ಅಪಘಾತ ಪ್ರಕರಣಗಳೂ ಕೂಡಾ ದಾಖಲಾಗುತ್ತಿದೆ. ವಿದ್ಯಾರ್ಥಿಗಳು ಅದರಲ್ಲೂ ಕೂಡಾ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಗುಂಪು ಗುಂಪಾಗಿ ಕಚ್ಚಾಡಿಕೊಂಡು ಶರವೇಗದಿಂದ ಓಡಿಬರುವ ನಾಯಿಗಳ ಹಿಂಡಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಓಡುವ ದುಸ್ಥಿತಿ ಎದುರಾಗಿದೆ. ಈಗಾಗಲೇ ಅನೇಕ ವಿದ್ಯಾರ್ಥಿಗಳಿಗೆ ಬೀದಿ ನಾಯಿಗಳು ಕಚ್ಚಿರುವ ನಿದರ್ಶನಗಳೂ ಇದೆ. ಕೆಲವು ಅಂಗಡಿಗಳ ಮುಂದೆಯೇ ಬೀದಿ ನಾಯಿಗಳು ಬೀಡು ಬಿಟ್ಟಿರುವುದರಿಂದ ಅಂಗಡಿಗಳಿಗೆ ತೆರಳುವುದಕ್ಕೆ ಜನಸಾಮಾನ್ಯರು ಹಿಂಜರಿಯುವಂತಾಗಿದೆ.

ಇಂಜೆಕ್ಷನ್‌ ಹಾಕಿಸಿಕೊಳ್ಳಿ

ನಾಯಿ ಕಚ್ಚಿದಾಗ ಅದನ್ನು ನಿರ್ಲಕ್ಷಿಸದೇ ತಕ್ಷಣವೇ ಅಗತ್ಯ ಚಿಕಿತ್ಸೆ ಪಡೆಯಬೇಕು. ಬೀದಿ ನಾಯಿ ಇರಲಿ, ಸಾಕು ನಾಯಿಯೇ ಆಗಿರಲಿ, ಕಚ್ಚಿದರೆ ಚುಚ್ಚುಮದ್ದು ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಸಾಕು ನಾಯಿ ಕಚ್ಚಿದ್ದು ತೊಂದರೆ ಇಲ್ಲ ಎಂದು ಭಾವಿಸಲೇಬಾರದು. ನಾಯಿ ಕಚ್ಚಿದ ಕೂಡಲೇ ಇಂಜೆಕ್ಷನ್ ತೆಗೆದುಕೊಳ್ಳುವುದು ಅತಿ ಅಗತ್ಯ ಆ್ಯಂಟಿ ರೇಬಿಸ್ ಇಂಜೆಕ್ಷನ್ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಭ್ಯ. ನಾಯಿ ಕಚ್ಚಿದ ಸಮಯದಲ್ಲಿ ಮೊದಲ ಇಂಜೆಕ್ಷನ್ ತೆಗೆದುಕೊಂಡರೆ ಆ ಬಳಿಕ ನಾಲ್ಕು ಇಂಜೆಕ್ಷನ್ (3,7,14 ಹಾಗೂ 28 ದಿನಗಳಿಗೆ) ತೆಗೆದುಕೊಳ್ಳಬೇಕು. ಒಂದು ವೇಳೆ ಕಚ್ಚಿದ ನಾಯಿಯ ಆರೋಗ್ಯ ಸ್ಥಿತಿ ತಿಳಿಯದೇ ಹೋಗಿದ್ದರೆ ಅಂದರೆ ಆ ನಾಯಿ ಪತ್ತೆಯಾಗದಿದ್ದರೆ 60 ಹಾಗೂ 90ನೇ ದಿನ ಕೂಡ ಚುಚ್ಚುಮದ್ದು ಪಡೆಯಬೇಕು. ಕೆಲವೊಂದು ಸಮಯದಲ್ಲಿ ಕಚ್ಚಿದ ಗಾಯ ತೀವ್ರವಾಗಿದ್ದರೆ ಆ್ಯಂಟಿ ರೇಬಿಸ್ ಜತೆಗೆ ಹೀಮಿನೋಗ್ಲೋಬಿನ್ಸ್ ಇಂಜೆಕ್ಷನ್‌ನ್ನು ಗಾಯದ ಜಾಗದಲ್ಲಿ ನೀಡುವ ಮೂಲಕ ವೈರಸ್ ತಡೆಗಟ್ಟಬಹುದು.
ನಾಯಿ ಮಾತ್ರವಲ್ಲ ಯಾವುದೇ ಪ್ರಾಣಿಗಳು ಕಚ್ಚಿದಲ್ಲಿ ಅಥವಾ ಪರಚಿದಲ್ಲಿ ಅವಶ್ಯವಾಗಿ ಇಂಜೆಕ್ಷನ್ ಹಾಕಿಸಿಕೊಳ್ಳಲೇಬೇಕು. ಏಕೆಂದರೆ ರೇಬಿಸ್ ಕೇವಲ ನಾಯಿಯಿಂದ ಮಾತ್ರವಲ್ಲ ಇತರೇ ಯಾವುದೇ ಪ್ರಾಣಿಗಳಿಂದಲೂ ಹರಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಸುತ್ತಿದ್ದೇವೆ ಎಂದು ಕಾರ್ಕಳ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ಶ್ರೀಮತಿ ಶಶಿಕಲಾ ಅವರು ಜನತೆಯಲ್ಲಿ ವಿನಂತಿಸಿದ್ದಾರೆ.

ರಾಜ್ಯ ಸರಕಾರಕ್ಕೆ ಭಾರಿ ದಂಡ- ಸುಪ್ರೀಂಕೋರ್ಟ್ ಎಚ್ಚರಿಕೆ

ಸರ್ವೋಚ್ಛ ನ್ಯಾಯಾಲಯವು ಇತ್ತೀಚೆಗೆ ಬೀದಿ ನಾಯಿಗಳ ಪ್ರಕರಣದ ವಿಚಾರಣೆ ನಡೆಸುವಾಗ ಪ್ರತಿ ನಾಯಿ ಕಡಿತ ಮತ್ತು ಪ್ರತಿ ಸಾವಿಗೆ ರಾಜ್ಯಗಳಿಗೆ ಭಾರೀ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ನಾಯಿಗಳಿಗೆ ಆಹಾರ ನೀಡುವವರನ್ನೂ ಸಹ ಜೀವಮಾನ ಪೂರ್ತಿ ಪರಿಣಾಮ ಬೀರುವಂತಹ ದಾಳಿಗಳಿಗೆ ಹೊಣೆಗಾರರನ್ನಾಗಿ ಮಾಡುವುದಾಗಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ನಾಯಿ ಕಡಿತದಿಂದ ಪ್ರಾಣ ಕಳೆದುಕೊಂಡ ಪ್ರತಿ ವ್ಯಕ್ತಿಗೆ ಪರಿಹಾರ ನೀಡಬೇಕೆಂದು ಅಭಿಪ್ರಾಯಪಟ್ಟಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

⚠️ Contents are protected on this website.