ಮಂಗಳೂರು, ಜ. 01 : ‘ಸು ಪ್ರಮ್ ಸೋ’ ಮೂಲಕ ಕೇವಲ ರಾಜ್ಯವಲ್ಲದೆ ದೇಶದೆಲ್ಲೆಡೆ ಸದ್ದು ಮಾಡಿದ ಜೆಪಿ ತುಮಿನಾಡ್ ಇದೀಗ ತುಳು ಚಿತ್ರವೊಂದರ ಮೂಲಕ ಮತ್ತೆ ಸಿನಿಪ್ರಿಯರ ಹೃದಯ ಗೆಲ್ಲಲು ಸಜ್ಜಾಗಿದ್ದಾರೆ. ‘ಕಟ್ಟೆಮಾರ್’ (Kattemar) ಎಂಬ ಚಿತ್ರದ ಮೂಲಕ, ಸಿನಿಪ್ರಿಯರ ಮನಸ್ಸು ಗೆಲ್ಲಲು ಜೆಪಿ ತುಮಿನಾಡ್ ಸಿದ್ಧರಾಗಿದ್ದಾರೆ.
ಹೌದು, ಜೆಪಿ ತುಮಿನಾಡ್ ನಟನೆಯ ಚಿತ್ರವೊಂದು ತಯಾರಾಗಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಈ ಬಾರಿ ಜೆಪಿ ಕೇವಲ ನಟನಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಮೂಲತಃ ತುಳು ರಂಗಭೂಮಿ ಕಲಾವಿದನಾದರೂ ಜೆಪಿ ತುಮಿನಾಡ್ ಹೆಸರು ಮಾಡಿದ್ದು ಕನ್ನಡದಲ್ಲೇ. ತುಳು ಭಾಷೆಯಲ್ಲಿ ಈ ಹಿಂದೆ ಕೆಲವು ಪಾತ್ರಗಳನ್ನು ಮಾಡಿದ್ದರೂ, ಒಬ್ಬ ನಟನಾಗಿ ಅಸ್ತಿತ್ವ ಕಂಡುಕೊಳ್ಳುವಂತೆ ಮಾಡಿದ್ದು ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಗಳ ಪಾತ್ರಗಳು. ಇದೀಗ ಹಲವು ವರ್ಷಗಳ ಬಳಿಕ ಒಂದು ತೂಕದ ಪಾತ್ರದ ಮೂಲಕ ನಟನಾಗಿ ತುಳು ಇಂಡಸ್ಟ್ರಿಗೆ ಜೆಪಿ ಬರುತ್ತಿದ್ದಾರೆ. ಇದು ಒಂದು ರೀತಿಯ ಕಮ್ ಬ್ಯಾಕ್ ಎನ್ನಬಹುದು.
ಇನ್ನು ‘ಕಟ್ಟೆಮಾರ್’ ಚಿತ್ರದಕ್ಕೆ ರಕ್ಷಿತ್ ಗಾಣಿಗ ಮತ್ತು ಸಚಿನ್ ಕಟ್ಲ ನಿರ್ದೇಶನದ ಚಿತ್ರಕ್ಕೆ ಬಂಡವಾಳ ಹೂಡಿದ್ದು ಲಂಚುಲಾಲ್ ಕೆ.ಎಸ್ ಅವರು. ಇತ್ತೀಚೆಗೆ ತುಳು ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುತ್ತಿರುವ ಲಂಚುಲಾಲ್ ಅವರು ತಮ್ಮ ಅಸ್ತ್ರ ಪ್ರೊಡಕ್ಷನ್ ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದು ಮಾತ್ರವಲ್ಲದೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 23ರಂದು ತುಳು ಭಾಷೆಯೊಂದಿಗೆ ಕನ್ನಡದಲ್ಲೂ ಚಿತ್ರ ರಿಲೀಸ್ ಆಗಲಿದೆ.
‘ಕಟ್ಟೆಮಾರ್’ ಚಿತ್ರದಲ್ಲಿ ಜೆಪಿ ತುಮಿನಾಡ್ ಜೊತೆಗೆ ನೆತ್ತರೆಕೆರೆ’ ಖ್ಯಾತಿಯ ಸ್ವರಾಜ್ ಶೆಟ್ಟಿ ಕೂಡಾ ನಟಿಸಿದ್ದಾರೆ. ಸಚಿನ್ ಕಟ್ಲ ಮತ್ತು ರಕ್ಷಿತ್ ಗಾಣಿಗ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿರುವ ಚಿತ್ರ ತಂಡ ತನ್ನ ಕಾಲಿಟಿಯಿಂದ ಗಮನ ಸೆಳೆದಿದೆ. ಪಾತ್ರವರ್ಗದಲ್ಲಿ ಉಳಿದಂತೆ ಮೈಮ್ ರಾಮದಾಸ್, ಬಾಸುಮ ಕೊಡಗು, ಭಗವಾನ್ ಸುರತ್ಕಲ್, ನಮಿತಾ ಕಿರಣ್ ಮುಂತಾದವರಿದ್ದಾರೆ. ಕಾರ್ತಿಕ್ ಮೂಲ್ಕಿ ಸಂಗೀತ, ಗಣೇಶ್ ನೀರ್ಚಾಲು ಸಂಕಲನ, ಸಂತೋಷ್ ಆಚಾರ್ಯ ಗುಂಪಲಾಜೆ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಟೀಸರ್ ನಲ್ಲಿ ಭರವಸೆ ಮೂಡಿಸಿರುವ ಚಿತ್ರ ಜ. 23ರಂದು ತೆರೆಗೆ ಬರಲಿದೆ.

