ಬೆಂಗಳೂರು, ಡಿ. 26 : ವಿಜಯ ಹಝಾರೆ ಟ್ರೋಫಿಯ ಎಲ್ಲರ ಗಮನ ಇದ್ದಿದ್ದು ವಿರಾಟ್ ಕೊಹ್ಲಿ ಮೇಲೆ. ದಶಕಗಳ ಬಳಿಕ ವಿಜಯ್ ಹಜಾರೆ ಟ್ರೋಫಿ ಆಡಿದ ಮೊದಲ ಪಂದ್ಯದಲ್ಲೇಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಐತಿಹಾಸಿಕ ದಾಖಲೆಯನ್ನು ಮುರಿದು, ತನ್ನದೇ ದಾಖಲೆಯ ಸಾಮ್ರಾಜ್ಯ ರಚಿಸಿದ್ದಾರೆ.

ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆದ ಆಂಧ್ರ ವಿರುದ್ಧದ ಪಂದ್ಯದಲ್ಲಿ ದೆಹಲಿ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲಿ ಗಳಿಸಿದ ಮೊದಲ ರನ್‌ನೊಂದಿಗೆ ಲಿಸ್ಟ್ ಎ (ಏಕದಿನ) ಕ್ರಿಕೆಟ್‌ನಲ್ಲಿ 16,000 ರನ್‌ಗಳ ಗಡಿ ದಾಟಿದರು.
ಆಂಧ್ರ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 15,999 ರನ್‌ಗಳನ್ನು ಗಳಿಸಿದ್ದರು. ಒಂದು ರನ್ ದಾಖಲಿಸುವ ಮೂಲಕವೇ ಅವರು ಈ ಮಹತ್ವದ ಮೈಲಿಗಲ್ಲನ್ನು ತಲುಪಿದರು. ಇದರೊಂದಿಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 16 ಸಾವಿರ ರನ್ ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ ಅವರು 391 ಇನಿಂಗ್ಸ್‌ಗಳಲ್ಲಿ 16,000 ರನ್ ಪೂರೈಸಿದ್ದರು. ಆದರೆ ವಿರಾಟ್ ಕೊಹ್ಲಿ ಕೇವಲ 330 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸಚಿನ್ ದಾಖಲೆಯನ್ನು ಮುರಿದರು.
ಈ ಮೂಲಕ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಇನಿಂಗ್ಸ್‌ಗಳಲ್ಲಿ 16 ಸಾವಿರ ರನ್ ಗಳಿಸಿದ ಬ್ಯಾಟರ್ ಎಂಬ ಹೊಸ ವಿಶ್ವ ದಾಖಲೆ ಈಗ ಕಿಂಗ್ ಕೊಹ್ಲಿಯ ಹೆಸರಿನಲ್ಲಿದೆ.

