ನವದೆಹಲಿ, ಫೆ. 12 : ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜುಜು ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಅಧಿವೇಶನದಲ್ಲಿ ಬುಧವಾರ ಭಾಷಣದ ವೇಳೆ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ವಾಗ್ವಾದ ನಡೆಯಿತು. ಅಮೆರಿಕದ ಒತ್ತಡಕ್ಕೆ ಮೋದಿ ಸರ್ಕಾರ ಶರಣಾಗಿದೆ. ಮೋದಿ ಸರ್ಕಾರ ಅಮೆರಿಕಕ್ಕೆ ಭಾರತ ಮಾತೆಯನ್ನು ಮಾರಾಟ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ಸರ್ಕಾರದ ಕಡೆಯಿಂದ ಮತ್ತು ಸ್ಪೀಕರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಕಿರಣ್ ರಿಜಿಜು, “ನೀವು ಯಾವುದೇ ಪುರಾವೆಗಳಿಲ್ಲದೆ ಆರೋಪಗಳನ್ನು ಹೊರಿಸುತ್ತಿದ್ದೀರಿ. ಅದು ಸ್ವೀಕಾರಾರ್ಹವಲ್ಲ. ನಿಮ್ಮ ಆರೋಪಗಳಿಗೆ ಸಾಕ್ಷಿ ನೀಡಿ. ಭಾರತ ಮಾರಾಟಕ್ಕಿಲ್ಲ. ಕಾಂಗ್ರೆಸ್ ಪಕ್ಷವು ದೇಶವನ್ನು ದುರ್ಬಲಗೊಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ಬಲಿಷ್ಠ ಪ್ರಧಾನಿ. ಭಾರತ ಪ್ರಗತಿ ಹೊಂದುತ್ತಿರುವುದರಿಂದ ಕಾಂಗ್ರೆಸ್ ದುಃಖಿತವಾಗಿದೆ” ಎಂದು ವಾಗ್ದಾಳಿ ನಡೆಸಿದರು.
“ರಾಹುಲ್ ಗಾಂಧಿ ಸರ್ಕಾರ ಮತ್ತು ಪ್ರಧಾನಿ ವಿರುದ್ಧ ಆಧಾರ ರಹಿತ ಹಾಗೂ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಭಾರತವನ್ನು ಯಾರೂ ಮಾರಲಾರರು, ಖರೀದಿಸಲಾರರು ಎಂದು ನಾನು ಅವರಿಗೆ ನೆನಪಿಸಿದೆ. ಯಾವುದೇ ಸದಸ್ಯ ಗಂಭೀರ ಆರೋಪ ಮಾಡಬೇಕಾದರೆ ಮುಂಚಿತವಾಗಿ ನೋಟಿಸ್ ನೀಡಬೇಕು ಎಂದು ನಿಯಮಗಳಿವೆ. ಆರೋಪಗಳನ್ನು ಸಾಬೀತುಪಡಿಸಬೇಕು. ರಾಹುಲ್ ಗಾಂಧಿ ಯಾವುದೇ ಪುರಾವೆ, ಚರ್ಚೆ ಅಥವಾ ನಿಯಮಾವಳಿ ನೋಟಿಸ್ ಇಲ್ಲದೆ ಆರೋಪ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

