ಸುರತ್ಕಲ್, ಮಾ. 14 : ಇಲ್ಲಿನ ಚೇಳ್ಯಾರು ಗ್ರಾಮ ಪಂಚಾಯತ್ನ ಮಧ್ಯದ ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ಕಾಲನಿಯ ಆರು ಕುಟುಂಬಗಳ ನೀರಿನ ಸಂಪರ್ಕ ಕಡಿತಗೊಳಿಸಿದ್ದ ಸ್ಥಳಕ್ಕೆ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಮಹೇಶ್ ಹೊಳ್ಳ ಅವರು ಶುಕ್ರವಾರ ಸಂಜೆ ಭೇಟಿ ನೀಡಿ ಕಾಲನಿ ನಿವಾಸಿಗಳ ಅಹವಾಲು ಆಲಿಸಿದರು.
ಈ ವೇಳೆ ಕೊರಗ ಕಾಲನಿಯ ಸಂತ್ರಸ್ತರು ಚೇಳಾಯರು ಗ್ರಾಮ ಪಂಚಾಯತ್‌ನ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀರಿನ ಸಂಪರ್ಕಕ್ಕೆ ಅಳವಡಿಸಿದ್ದ ವಿದ್ಯುತ್ ಕಡಿತಗೊಳಿಸಿರುವ ಬಗ್ಗೆ ಮಾಹಿತಿ ಕೇಳಿದ ತಾ.ಪಂ. ಇಒ ಅವರು, ಕಡಿತಗೊಳಿಸಿದ್ದ ಮನೆಗೆಳ ನೀರಿನ ಸಂಪರ್ಕವನ್ನು ಜೋಡಿಸುವಂತೆ ಸೂಚನೆ ನೀಡಿದರು. ಜೊತೆಗೆ ನೀರಿನ ಟ್ಯಾಂಕ್ ಗೆ ಅಳವಡಿಸಿದ್ದ ವಿದ್ಯುತ್ ಸಂಪರ್ಕವನ್ನೂ ಮರುಜೋಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ಅಧಿಕಾರಿಗಳು ಸಂಪರ್ಕ ಮರುಜೋಡಣೆ ನಡೆಸಿದರು.
ನಳ್ಳಿಯಲ್ಲಿ ಕಲುಷಿತ ನೀರುಬರುತ್ತಿರುವ ಬಗ್ಗೆ ಕಾಲನಿ ನಿವಾಸಿಗಳು ಕಾರ್ಯನಿರ್ವಹಣಾಧಿಕಾರಿಗೆದೂರು ನೀಡಿದರು. ಈ ವೇಳೆ ನೀರಿನ ಮಾದರಿಯನ್ನು ಪಡೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗುವುದು. ವರದಿ ಬಂದ ಬಳಿಕ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಮಹೇಶ್ ಹೊಳ್ಳ ಅವರು, ಸದ್ಯ ನೀರಿನ ಬಿಲ್ ಕಟ್ಟದಿರುವ ಕಾರಣಕ್ಕೆ ಕಾನೂನು ಪ್ರಕಾರ ನೀರಿನ ಮೀಟರ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಸದ್ಯ ಮರು ವಿದ್ಯುತ್ ಸಂಪರ್ಕ ನೀಡಲಾಗುವುದು. ಬಾಕಿರುವ ವಿದ್ಯುತ್ ಬಿಲ್ ನ ಶೇ.50ನ್ನು ಕಾಲಾವಕಾಶ ಪಡೆದುಕೊಂಡು ಮನೆಯವರು ಭರಿಸಬೇಕು, ಉಳಿದ ಶೇ.50ನ್ನು ಸರಕಾರ ಭರಿಸಲಿದೆ ಎಂದು ಹೇಳಿದರು. ಈ ಮೂಲಕ ಕೊರಗ ಸಮುದಾಯದ ಆರು ಮನೆಗಳ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ ಪ್ರಕರಣ ತಾತ್ಕಾಲಿಕವಾಗಿ ಬಗೆಹರಿದಿದೆ.
ಈ ಅನ್ಯಾಯವನ್ನು ನಾವು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಪಂಚಾಯತ್ ಆಡಳಿತವು ಸೇಡು ತೀರಿಸುವ ರೀತಿಯಲ್ಲಿ ವರ್ತಿಸಿರುವುದು ಇನ್ನಷ್ಟು ಗಂಭೀರ ವಿಷಯವಾಗಿದೆ. ಮನೆಗಳಿಗೆ ನೀರಿನ ಸಂಪರ್ಕ ಕಡಿತಗೊಂಡ ಬಳಿಕ ಕೊರಗ ಕುಟುಂಬಗಳು ಕಾಲೋನಿಯಲ್ಲಿದ್ದ ಪಂಚಾಯತ್ ಸಾರ್ವಜನಿಕ ಕೊಳವೆಯಿಂದ ನೀರು ತಂದು ಬದುಕು ಸಾಗಿಸುತ್ತಿದ್ದರು. ಆದರೆ ಇದನ್ನೂ ಸಹಿಸದ ಪಂಚಾಯತ್ ಆಡಳಿತವು ಆ ಕೊಳವೆಯ ನೀರಿನ ಸಂಪರ್ಕವನ್ನೂ ಕಡಿತಗೊಳಿಸಿರುವುದು ಆಡಳಿತದ ಕ್ರೂರ ಮನೋಭಾವವನ್ನು ಸ್ಪಷ್ಟವಾಗಿ ಬಯಲಿಗೆಳೆದಿದೆ.
ಇದರಿಂದಾಗಿ ಆರು ಕೊರಗ ಕುಟುಂಬಗಳನ್ನು ಹನಿ ನೀರಿಗೂ ವಂಚಿಸುವ ಮಟ್ಟಿಗೆ ಆಡಳಿತ ಇಳಿದಿರುವುದು ಅಕ್ಷರಶಃ ಅಮಾನವೀಯ ದೌರ್ಜನ್ಯವಾಗಿದೆ. ದುಡ್ಡಿಲ್ಲದಿದ್ದರೆ ನೀರು ಕೂಡ ಸಿಗಬಾರದು ಎಂಬ ಅಮಾನವೀಯ ಸಂದೇಶವನ್ನು ಸರ್ಕಾರದ ಆಡಳಿತ ವ್ಯವಸ್ಥೆಯೇ ನೀಡುತ್ತಿರುವಂತಾಗಿದೆ. ಅಳಿವಿನಂಚಿನ ಬುಡಕಟ್ಟು ಸಮುದಾ ಯದ ಮೇಲೆ ನಡೆಯುತ್ತಿರುವ ಈ ರೀತಿಯ ವರ್ತನೆ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ತುಳಿಯುವಂತಾಗಿದೆ.
ಈ ಘಟನೆ ಬಗ್ಗೆ ಜಿಲ್ಲಾಡಳಿತ ತೋರಿಸುತ್ತಿರುವ ಮೌನ ಅತ್ಯಂತ ಖಂಡನೀಯ ಮತ್ತು ಅಸಹನೀಯವಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಈ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮರು ಸ್ಥಾಪಿಸಬೇಕು ಮತ್ತು ಈ ಅಮಾನವೀಯ ಕ್ರಮಕ್ಕೆ ಹೊಣೆಗಾರರಾದ ಪಂಚಾಯತ್ ಆಡಳಿತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಅನ್ಯಾಯದ ವಿರುದ್ಧ ತೀವ್ರ ಹೋರಾಟ ಮತ್ತು ಜನಪ್ರತಿರೋಧ ಅನಿವಾರ್ಯ ವಾಗಲಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸ್ಪಷ್ಟವಾಗಿ ಎಚ್ಚರಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

