ದೆಹಲಿ, ಡಿ. 06 : ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಹವಾಮಾನಾಧರಿತ ಬೆಳೆ ವಿಮೆಯ ಸಮಸ್ಯೆಯಿಂದ ರೈತ ಸಂಕಷ್ಟದಲ್ಲಿದ್ದಾರೆ. ಅಡಿಕೆ, ಕಾಳುಮೆಣಸು, ಸೇರಿದಂತೆ ಹವಾಮಾನಾಧರಿತ ಬೆಳೆ ವಿಮೆಗೆ ರೈತರು ಹಣ ಪಾವತಿಸಿ ನೊಂದಾಯಿಸಿಕೊಂಡಿದ್ದು, ಈಗ ಬೆಳೆ ವಿಮೆ ಪಾವತಿಯಲ್ಲಿ ವಿಮಾ ಕಂಪನಿಗಳ ತಾರತಮ್ಯ ಮತ್ತು ಬೇಜವಾಬ್ದಾರಿಯಿಂದ ರೈತರಿಗೆ ನಷ್ಟವಾಗಿದ್ದು, ತಕ್ಷಣ ರೈತರ ನೆರವಿಗೆ ಬರಬೇಕೆಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರವರಿಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದರು.
ಪ್ರತಿ ಗ್ರಾಮ ಪಂಚಾಯತಿನಲ್ಲೂ ಮಳೆ ಮಾಪಕಗಳನ್ನು ಅಳವಡಿಸಿದ್ದರೂ ಅಸಮರ್ಪಕ ನಿರ್ವಹಣೆಯಿಂದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗದೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮಳೆ ದಾಖಲೆಗಳಲ್ಲೂ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 39,507 ಮಂದಿ ರೈತರು ಬೆಳೆ ವಿಮೆ ಪಾವತಿಸಿದ್ದರೂ ಕೇವಲ 9,000 ಮಂದಿಗಷ್ಟೇ ಅತ್ಯಂತ ಕಡಿಮೆ ಮೊತ್ತ ಪಾವತಿಯಾಗಿದೆ. ಕೆಲವು ರೈತರ ಖಾತೆಗಳಿಗೆ ಕಟ್ಟಿದ ವಿಮಾ ಪ್ರೀಮಿಯಂಗಿಂತಲೂ ಕಡಿಮೆ ಪರಿಹಾರ ಬಂದಿದೆ ಎಂದು ಮನವಿಯಲ್ಲಿ ವಿವರಿಸಿದ್ದೇನೆ.ವಿಮಾ ಕಂಪನಿ ರೈತರಿಗೆ ನ್ಯಾಯ ಕೊಡದಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆಯ ಮಾರ್ಗ ಹಿಡಿದಿದ್ದು, ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ವಿಮಾ ವಂಚಿತ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವರು ಕೂಡಲೇ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

