ಬೆಂಗಳೂರು, ಫೆ. 20 : ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರು ತಾತ್ಕಾಲಿಕವಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು ರಾಜ್ಯ ಸರ್ಕಾರಕ್ಕೆ ಮಾರ್ಚ್ 2 ರವರೆಗೆ ಗಡುವು ನೀಡಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ನಗರ ಫ್ರೀಡಂ ಪಾರ್ಕ್ ನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಸಾರಿಗೆ ನೌಕರರಿಗೆ 38 ತಿಂಗಳ ವೇತನದ ಹಿಂಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಬಾಕಿ ಇರುವ ವೇತನ ಪರಿಷ್ಕರಣೆ ಮಾಡಿ ತಕ್ಷಣವೇ ಅದನ್ನು ಜಾರಿಗೆ ತರಬೇಕು ಎಂಬುವುದು ಆಗ್ರಹವಾಗಿದೆ. ಕೆ ಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯು ಕೆ ಆರ್ ಟಿ ಸಿ, ಕೆ ಕೆ ಆರ್ ಟಿ ಸಿ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸಾರಿಗೆ ನೌಕರರು ತಮ್ಮ ದೀರ್ಘಕಾಲಿಕ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಿದ್ದರು. ಆದರೆ ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್ ನಿಧನದ ಹಿನ್ನೆಲೆಯಲ್ಲಿ ಮುಷ್ಕರ ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಡೆಯಿತು. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ನೌಕರರು ಜಮಾಯಿಸಿದ್ದರು ಹಾಗೂ ಬೃಹತ್ ಪ್ರತಿಭಟನೆ ನಡೆಸಿದ್ದರು.
ಬೇಡಿಕೆಗಳೇನು?
- 38 ತಿಂಗಳ ವೇತನದ ಹಿಂಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.
- ಜನವರಿ 1 2024ಕ್ಕೆ ಅನ್ವಯ ಆಗುವಂತೆ ನೂತನ ವೇತನ ಶ್ರೇಣಿ ಜಾರಿಗೊಳಿಸಬೇಕು.
- ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರಿ ನೌಕರರ ಸರಿಸಮವಾದ ವೇತನ ನೀಡಬೇಕು.
- ಕೆಲಸದ ಅವಧಿಯಲ್ಲಿ ನೌಕರರಿಗೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ನಿಲ್ಲಿಸಬೇಕು.
- ಮಾರ್ಚ್ 2 ಕ್ಕೆ ಡೆಡ್ ಲೈನ್
ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧಾರ ಮಾಡಿದ್ದ ಸಾರಿಗೆ ನೌಕರರು ಸದ್ಯಕ್ಕೆ ಹೋರಾಟ ವಾಪಸ್ ಪಡೆಯಲು ನಿರ್ಧಾರ ಮಾಡಿದ್ದಾರೆ. 11 ದಿನಗಳ ಕಾಲ ಕಾಲಾವಕಾಶ ನೀಡಿದ್ದಾರೆ. ಜಂಟಿ ಕ್ರಿಯಾ ಸಮಿತಿ ನಿರ್ಧಾರಕ್ಕೆ ಕೆಲವು ನೌಕರರು ವಿರೋಧ ವ್ಯಕ್ತಪಡಿಸಿದರು. ಜಂಟಿ ಕ್ರಿಯಾ ಸಮಿತಿಯ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ಈ ಬಗ್ಗೆ ಮುಖಂಡರು ಘೋಷಣೆ ಮಾಡುತ್ತಿದ್ದಂತೆ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಪ್ರತಿಭಟನೆ ವಾಪಸ್ ಬೇಡ. ಮುಷ್ಕರವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ನಂತರದಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

