ಶಿವಮೊಗ್ಗ (ನ.27) : ಸರಕಾರಿ ಕೆಲಸದಲ್ಲಿರುವ ಹುಡುಗನನ್ನೇ ತಮ್ಮ ಮಗಳಿಗೆ ಮದುವೆ ಮಾಡುವ ಕನಸುಗೊಂಡಿದ್ದ ಕುಟುಂಬಕ್ಕೀಗ, ಕಂಡ ಕನಸು ಈಡೇರಿದ ಕೆಲವೇ ತಿಂಗಳಲ್ಲಿ ಮಗಳ ಮೃತದೇಹಕ್ಕೆ ಕೊಳ್ಳಿಯಿಡಬೇಕಾದ ದುರದೃಷ್ಟ ಎದುರಾಗಿದೆ. ಹೌದು, ಮಗಳನ್ನು ಮುದ್ದಿನ ಗಿಣಿಯಂತೆ ಸಾಕಿ, ಸರ್ಕಾರಿ ನೌಕರನನ್ನೇ ಹುಡುಕಿ ಮದುವೆ ಮಾಡಿ ಕೊಟ್ಟವರು ತಾವು ತಮ್ಮ ಗಿಣಿಯನ್ನು ಗರುಡನ ಕೈಗೆ ಕೊಟ್ಟಿದ್ದೇವೆ ಎಂಬ ಸತ್ಯವನ್ನು ಅರಿಯಲು ವಿಫಲರಾದರು. ಸುಂದರ ಬದುಕಿನ ಆಸೆಯೊಂದಿಗೆ ಸರ್ಕಾರಿ ನೌಕರನ ಹೊಸ್ತಿಲು ದಾಟಿದ ಮಗಳು ಇಂದು ನಾಲೆಯೊಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದಾಳೆಂಬ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ ಆ ಹೆಣ್ಣು ಮಗಳ ಕುಟುಂಬಕ್ಕೆ. ಪತಿ ಹಾಗೂ ಅತ್ತೆಯ ಚಿತ್ರಹಿಂಸೆಗೆ ನೊಂದ ಯುವತಿ ಡೆತ್ ನೋಟ್ ಬರೆದಿಟ್ಟು, ನಾಲೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಹೌದು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಡಿಬಿ ಹಳ್ಳಿಯ ಪರಮೇಶ್ವರಪ್ಪ-ರುದ್ರಮ್ಮ ದಂಪತಿಯ ಪುತ್ರಿ ಲತಾ ಎಂಬವರನ್ನು ದಿಂಡದ ಹಳ್ಳಿಯ ಗುರುರಾಜ್ ಎಂಬಾತನಿಗೆ ಬಹಳ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟರು. ಆರೋಪಿ ಗುರುರಾಜ್ ಕೆಪಿಸಿಎಲ್ ಎಇಇ ಆಗಿ ಕೆಲಸ ನಿರ್ವಹಿಸುತ್ತಿದ್ದ. ಮಗಳು ಸುಖವಾಗಿರಲಿ ಎಂಬ ಕಾರಣಕ್ಕೆ ಲಕ್ಷ ಲಕ್ಷ ಖರ್ಚು ಮಾಡಿ, ಸರ್ಕಾರಿ ಉದ್ಯೋಗಿಗೆ ಮದುವೆ ಮಾಡಿಕೊಟ್ಟರು. ಆದರೆ, ಗಂಡ ಗುರುರಾಜ್ ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ರಾಕ್ಷಸೀ ಪ್ರವೃತ್ತಿಯನ್ನು ಆಕೆಯ ಮುಂದೆ ಪ್ರದರ್ಶಿಸಲು ಆರಂಭಿಸಿದ್ದ ಎನ್ನಲಾಗಿದೆ. ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದಾನೆನ್ನುವ ಆರೋಪವನ್ನು ಲತಾ ಕುಟುಂಬಸ್ಥರು ಮಾಡಿದ್ದಾರೆ. ಸರ್ಕಾರಿ ನೌಕರ್ನಿಗೆ ಮದುವೆ ಮಾಡಿಕೊಟ್ಟರೆ, ಮಗಳ ಭವಿಷ್ಯದ ಬದುಕು ಸುಖಮಯವಾಗಿರುತ್ತದೆ ಎನ್ನುವ ತಂದೆ ತಾಯಿಯ ಕನಸು ಇಲ್ಲಿ ನುಚ್ಚು ನೂರಾಗಿದೆ.
ಸೂಚನೆ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಸಮಸ್ಯೆಗಳು ಮುಂದಿನ ಕ್ಷಣಕ್ಕೆ ಮುಗಿದು ಹೋಗಬಹುದು.! ಬದುಕು ಒಮ್ಮೆ ಹೋದರೆ ಮರಳಿ ಬಾರದು, ಕೆಟ್ಟ ಆಲೋಚನೆಗಳನ್ನು ಬಿಟ್ಟು ಸಮಸ್ಯೆ ಬಗೆಹರಿಸುವುದಕ್ಕಾಗಿ ಶ್ರಮ ಪಡಿ….

