ಬೆಂಗಳೂರು, ಜ. 08 : ಆಕೆಗೆ ಮದುವೆಯಾಗಿ ಆರು ವರ್ಷದ ಮಗಳಿದ್ದಾಳೆ. ತನ್ನ ಪತಿ ಕೆಲಸಕ್ಕೆ ತೆರಳಿದ ಮೇಲೆ, ಅದ್ಯಾವುದೋ ಯುವಕನ ಜೊತೆ ಆಕೆ ಮಾತನಾಡುತ್ತಿದ್ದಳು. ಇದೇ ಕಾರಣಕ್ಕೆ ಹಲವು ಬಾರಿ ಗಂಡ ಹೆಂಡತಿ ಮಧ್ಯೆ ಜಗಳವೂ ನಡೆದಿತ್ತು. ಕೊನೆಯದಾಗಿ ಜ. 5ರಂದು ಮತ್ತೆ ಪತಿ ಕರೆ ಬ್ಯುಸಿ ಬಂದಿದ್ದಕ್ಕೆ ಪ್ರಶ್ನಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ತನ್ನ ಆರು ವರ್ಷದ ಕಂದಮ್ಮನನ್ನು ಕೊಂದು, ತಾನು ನೇಣಿಗೆ ಶರಣಾಗಳು ಯತ್ನಿಸಿದ್ದಾಳೆ. ಆದರೆ, ಸದ್ಯ ಆಕೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪತಿ-ಪತ್ನಿಯ ಜಗಳ ಮಗುವಿನ ಕೊಲೆಯಲ್ಲಿ ಅಂತ್ಯ ಕಂಡಿದೆ.
ಘಟನೆ ವಿವರ :
ಯುವಕನ ಜತೆ ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದನ್ನು ಪತಿ ಪ್ರಶ್ನಿಸಿದಕ್ಕೆ ಕೋಪಗೊಂಡ ಪತ್ನಿ ತನ್ನ ಆರು ವರ್ಷದ ಮಗಳನ್ನು ನೇಣು ಬಿಗಿದು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೇಪಾಳ ಮೂಲದ ನಿರುತಾ (30) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಅದಕ್ಕೂ ಮೊದಲು ಕೃತಿಕಾ(6) ಎಂಬ ಪುತ್ರಿಯನ್ನು ನೇಣುಬಿಗಿದು ಹತ್ಯೆಗೈದಿದ್ದಾಳೆ. ಸದ್ಯ ನಿರುತಾ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಜ. 5ರಂದು ತಡರಾತ್ರಿ 11 ಗಂಟೆ ಸುಮಾರಿಗೆ ಹೆಣ್ಣೂರಿನ ಮಾರುತಿ ಲೇಔಟ್‌ನಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು. ಹತ್ತಾರು ವರ್ಷಗಳ ಹಿಂದೆಯೇ ನಿರುತಾ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದು, ಇಲ್ಲಿಯೇ ವಾಸವಾಗಿದ್ದಾರೆ. 8 ವರ್ಷಗಳ ಹಿಂದೆ ನೇಪಾಳ ಮೂಲದ ಕಿಶನ್ ಎಂಬಾತನನ್ನು ಮದುವೆಯಾಗಿದ್ದು, ದಂಪತಿಗೆ 6 ವರ್ಷಗಳ ಹಿಂದೆ ಕೃತಿಕಾ ಜನಿಸಿದ್ದಳು. ಕಿಶನ್ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಹೋಗುತ್ತಿದ್ದರೆ, ನಿರುತಾ ಮನೆಯಲ್ಲೇ ಇರುತ್ತಿದ್ದರು ಎಂದು ಪೊಲೀಸರು ಹೇಳಿದರು. ಪೋಷಕರಿಗೆ ಹೇಳುತ್ತೇನೆ ಎಂದಿದಕ್ಕೆ ಕೃತ್ಯ: ನಿರುತಾ ಸದಾ ಬೇರೊಬ್ಬ ಯುವಕನ ಜತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು. ಇದೇ ಕಾರಣಕ್ಕೆ ಪತಿ ಕಿಶನ್ ಆಕೆಯ ಮೇಲೆ ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸುತ್ತಿದ್ದ. ಅಲ್ಲದೆ, ಇದೇ ವಿಚಾರವಾಗಿ ದಂಪತಿ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು. ಜ.5ರಂದು ಕೂಡ ಸಂಜೆ ಕಿಶನ್ ಪತ್ನಿಗೆ ಹತ್ತಾರು ಬಾರಿ ಕರೆ ಮಾಡಿದ್ದು, ಕರೆ ಬ್ಯೂಸಿ ಬಂದಿದೆ. ಕೆಲ ಹೊತ್ತಿನ ಬಳಿಕ ಕರೆ ಸ್ವೀಕರಿಸಿದ ಪತ್ನಿಗೆ ನಿಂದಿಸಿದ್ದಾನೆ. ಯಾರೊಂದಿಗೆ ಮಾತನಾಡುತ್ತಿದ್ದೆ ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ, ಈ ವಿಚಾರವನ್ನು ನಿಮ್ಮ ಪೋಷಕರಿಗೆ ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ. ಆಗ ಕೋಪಗೊಂಡ ನಿರುತಾ, ಆಗಾದರೆ, ಇದೇ ನನ್ನ ನಿನ್ನ ಕೊನೆ ಸಂಭಾಷಣೆ, ಮಗಳನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿ ಕರೆ ಸ್ಥಗಿತಗೊಳಿಸಿದ್ದಾಳೆ ಎಂಬುದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪತ್ನಿ ಕರೆ ಸ್ಥಗಿತಗೊಳಿಸಿದ ಕೆಲ ಹೊತ್ತಿನ ಬಳಿಕ ಮತ್ತೆ ಹತ್ತಾರು ಬಾರಿ ಕಿಶನ್ ಕರೆ ಮಾಡಿದ್ದಾನೆ. ಆದರೆ, ಆಕೆ ಕರೆ ಸ್ವೀಕರಿಸಿಲ್ಲ. ನಂತರ ಗಾಬರಿಕೊಂಡು ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಬಂದು ಕಿಟಕಿಯಲ್ಲಿ ನೋಡಿದಾಗ ಪತ್ನಿ ಮತ್ತು ಮಗಳು ನೇಣುಬಿಗಿದುಕೊಂಡಿರುವುದು ಗೊತ್ತಾಗಿದೆ. ನಂತರ ಬಾಗಿಲ ಒಡೆದು ಒಳ ಹೋಗಿ, ಇಬ್ಬರನ್ನು ನೇಣಿನ ಕುಣಿಕೆಯಿಂದ ಇಳಿಸಿ, ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ, ಪರೀಕ್ಷಿಸಿದ ವೈದ್ಯರು ಕೃತಿಕಾ ಮೃತಪಟ್ಟಿದ್ದು, ನಿರುತಾ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ತುರ್ತು ನಿಗಾ ಘಟಕದಲ್ಲಿ ಇರಿಸಿದು ಚಿಕಿತ್ಸೆ ನೀಡುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾ ಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂದ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

