ಕಾರ್ಕಳ : ಮೊಬೈಲ್ ಎಂಬುದು ಯುವ ಸಮೂಹದ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಇಂದು ಸಣ್ಣ ವಯಸ್ಸಿನ ಮಕ್ಕಳು ಕೂಡಾ ಮೊಬೈಲ್ ಗೀಳಿಗೆ ಬಿದ್ದು, ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಂತಹುದ್ದೇ ಒಂದು ಹೃದಯವಿದ್ರಾವಕ ಘಟನೆ ಕಾರ್ಕಳದಲ್ಲಿ ನಡೆದಿದೆ. 16 ವರ್ಷದ ಬಾಲಕನೊಬ್ಬ ಹೊಸ ಮೊಬೈಲ್ ಕೊಡಿಸಲೆಂದು ಅಮ್ಮನ ಹಿಂದೆ ಬಿದ್ದಿದ್ದ. ಆದರೆ. ಅಮ್ಮ ಹೊಸ ಮೊಬೈಲ್ ಕೊಡಿಸುವುದಕ್ಕೆ ಹಿಂದೇಟು ಹಾಕಿದ್ದಾರೆ. ಇದೇ ಕಾರಣಕ್ಕೆ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಿಟ್ಟೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ ನಂದಳಿಕೆ (16) ಮೃತ ಬಾಲಕನೆಂದು ಗುರುತಿಸಲಾಗಿದೆ. ಸುಮಂತ್ ನೀರು ನಿಂತಿದ್ದ ಕಲ್ಲು ಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 13ರಂದು ನಡೆದಿದೆ. ಸುಮಂತ್‌ನ ಮೊಬೈಲ್ ಅನ್ನು ದುರಸ್ತಿಗೆ ನೀಡಲಾಗಿದ್ದು, ಹೊಸ ಮೊಬೈಲ್ ಕೊಡಿಸುವಂತೆ ಗುರುವಾರ ಅಮ್ಮನಲ್ಲಿ ಕೇಳಿಕೊಂಡಿದ್ದ ಬಾಲಕ. ಕೆಲ ತಿಂಗಳು ಕಳೆದ ಬಳಿಕ ಹೊಸ ಮೊಬೈಲ್ ಕೊಡಿಸುವುದಾಗಿ ಅಮ್ಮ ಸುರೇಖಾ ಭರವಸೆ ನೀಡಿದ್ದರು. ಆದರೆ, ಇದರಿಂದ ಕೋಪಗೊಂಡ ಬಾಲಕ ಮನೆಬಿಟ್ಟು ತೆರಳಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ. ಸುಮಂತ್ ತಂದೆ ಮಂಜುನಾಥ್ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ತಾಯಿ ಅವರಿಗೆ ಸುಮಂತ್ ಏಕೈಕ ಮಗನಾಗಿದ್ದನು. ಇದ್ದ ಒಬ್ಬ ಮಗನನ್ನು ಕೂಡಾ ಕಳೆದುಕೊಂಡ ತಾಯಿಯ ವ್ಯಥೆ ಹೇಳತೀರದಾಗಿದೆ.
ಸಣ್ಣ ವಯಸ್ಸಿಗೆ ಮಕ್ಕಳು ಹಠ ಮಾಡಿದರೆಂದು ಅಥವಾ ಇನ್ಯಾವುದೋ ಕಾರಣಕ್ಕೆ ನಿಮ್ಮ ಮಕ್ಕಳನ್ನು ಮೊಬೈಲ್ ಎಂಬ ಮಾಯಾ ಜಾಲದ ಒಳಗೆ ಸಿಲುಕಿಸುವ ಮೊದಲು ಹೆತ್ತವರು ಕೂಡಾ ಯೋಚಿಸಬೇಕಿದೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ.

