ವಾರಾಣಸಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಾಣಸಿಯಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಬನಾರಸ್-ಖಜುರಾಹೊ, ಲಕ್ನೋ-ಸಹಾರನ್‌ಪುರ, ಫಿರೋಜ್‌ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಹೊಸ ರೈಲುಗಳನ್ನು, ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು.
ವಾರಾಣಸಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಹೊಸ ವಂದೇ ಭಾರತ್ ರೈಲುಗಳಿಗೆ ಏಕಕಾಲಕ್ಕೆ ಹಸಿರು ನಿಶಾನೆ ತೋರಿದರು. ಆ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಹೊಸ ವಂದೇ ಭಾರತ್ ರೈಲುಗಳು, ಭಾರತೀಯ ರೈಲ್ವೆಯ ಸಂಪರ್ಕ ಜಾಲವನ್ನು ಮತ್ತಷ್ಟು ಸದೃಢಗೊಳಿಸಲಿದೆ. ವಂದೇ ಭಾರತ್ ರೈಲುಗಳು ಸಂಪರ್ಕವನ್ನು ಹೆಚ್ಚಿಸುತ್ತದೆಯಲ್ಲದೇ, ಪ್ರಯಾಣಿಕರಿಗೆ ಹೆಚ್ಚಿನ ಮೂಲಸೌಕರ್ಯವನ್ನು ಒದಗಿಸುತ್ತವೆ. ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ್ ಭಾರತ್ ನಂತಹ ರೈಲು ಸೇವೆಗಳು, ಹೊಸ ಪೀಳಿಗೆಯ ಭಾರತೀಯ ರೈಲ್ವೆಗೆ ಅಡಿಪಾಯ ಹಾಕುತ್ತಿವೆ. ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮೂಲಸೌಕರ್ಯವು ಪ್ರಮುಖ ಅಂಶವಾಗಿದ್ದು, ಭಾರತವು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಚಲಿಸುತ್ತಿದೆ” ಎಂದರು.

