ಮುಂಬೈ, ಫೆ. 12 : ದೇಶದ ಮೊದಲ ಮ್ಯೂಸಿಕಲ್ ರಸ್ತೆಯನ್ನು ಮುಂಬೈನಲ್ಲಿ ನಿರ್ಮಿಸಲಾಗಿದ್ದು, ಈ ರಸ್ತೆ ಮೇಲೆ ವಾಹನಗಳು ಚಲಿಸಿದಾಗ ‘ಜೈ ಹೋ’ ಹಾಡು ಕೇಳಿಸುತ್ತದೆ. ಮುಂಬೈ ಕರಾವಳಿ ರಸ್ತೆಯಲ್ಲಿ ಸ್ಥಾಪಿತವಾದ ಈ ವಿಶೇಷ ರಸ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿದ್ದರು.
ವಾಹನಗಳು ನಿಗದಿತ ವೇಗದಲ್ಲಿ ಸಾಗುವಾಗ ಮಾತ್ರ ಈ ಹಾಡು ಕೇಳಿಸಲಿದೆ. ನಾರಿಮನ್ ಪಾಯಿಂಟ್‌ನಿಂದ ವರ್ಲಿಗೆ ಹೋಗುವ ಲೇನ್‌ನಲ್ಲಿ ನಿರ್ಮಿಸಲಾದ ಈ ರಸ್ತೆಯಲ್ಲಿ, ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ವಾಹನ ಚಲಿಸಿದಾಗ ಟೈರ್‌ಗಳು ಮತ್ತು ರಸ್ತೆಯ ನಡುವೆ ಉಂಟಾಗುವ ಘರ್ಷಣೆಯಿಂದ ಶಬ್ದ ತರಂಗಗಳು ಸೃಷ್ಟಿಯಾಗುತ್ತವೆ. ಚಾಲಕರಿಗೆ ಈ ಸಂಗತಿಯನ್ನು ಮುಂಚಿತವಾಗಿ ತಿಳಿಸಲು 500 ಮೀಟರ್, 100 ಮೀಟರ್ ಮತ್ತು 60 ಮೀಟರ್ ದೂರದಲ್ಲಿ ಫಲಕಗಳನ್ನು ಅಳವಡಿಸಲಾಗಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮಾಹಿತಿ ನೀಡಿದ್ದು, ಈ ರಸ್ತೆ ದೇಶದಲ್ಲಿ ಮೊದಲ ಮ್ಯೂಸಿಕಲ್ ರಸ್ತೆ ಆಗಿದ್ದು, ನಗರ ನಿವಾಸಿಗಳಿಗೆ ವಿಶೇಷ ಅನುಭವ ನೀಡುತ್ತದೆ ಮತ್ತು ಸರಿಯಾದ ವೇಗದಲ್ಲಿ ವಾಹನ ಸಾಗಿಸುವ ಪ್ರೇರಣೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಈ ರಸ್ತೆಗೆ ಧೈರ್ಯಶಾಲಿ ಮತ್ತು ಸ್ವಾಭಿಮಾನಿ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಹೆಸರನ್ನು ನೀಡಲಾಗಿದೆ.
ಜಾಗತಿಕ ದೃಷ್ಟಿಕೋಣದಲ್ಲಿ, ಮ್ಯೂಸಿಕಲ್ ರಸ್ತೆ ಕಲ್ಪನೆ ಮೊದಲು 2007 ರಲ್ಲಿ ಜಪಾನ್‌ನಲ್ಲಿ ಪ್ರಾರಂಭವಾಯಿತು. ನಂತರ ಹಂಗೇರಿ, ದಕ್ಷಿಣ ಕೊರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಅನೇಕ ದೇಶಗಳಲ್ಲಿ ಇದೇ ರೀತಿಯ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಮುಂಬೈ, ಭಾರತದಲ್ಲಿ ಮೊದಲ ಮ್ಯೂಸಿಕಲ್ ರಸ್ತೆ ನಿರ್ಮಿಸುವ ನಗರವಾಗಿ ದಾಖಲೆಯಾಗಿದೆ.

