ಕೇರಳದಲ್ಲಿ ಹೊಸ ವಿವಾದ : ಸಾಂಪ್ರದಾಯಿಕ ‘ನಂದಾದೀಪ’ ಬೆಳಗಿಸಿದ ಮುಸ್ಲಿಂ ಶಾಸಕಿ – ಧರ್ಮದಿಂದಲೇ ಹೊರಹಾಕುವ ಎಚ್ಚರಿಕೆ ?

ತಿರುವನಂತಪುರಂ, ಜೂ. 09 : ಕೇರಳದ ಪ್ರಮುಖ ರಾಜಕೀಯ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷದ ಮೊದಲ ಮಹಿಳಾ ಶಾಸಕಿ ಫಾತಿಮಾ ತಹ್ಲಿಯಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಾಂಪ್ರದಾಯಿಕ ‘ನಿಲವಿಳಕ್ಕು’ (ನಂದಾದೀಪ) ಬೆಳಗಿಸಿರುವುದು ಈಗ ರಾಜ್ಯದ ಮುಸ್ಲಿಂ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ.

Advertisement


ಕೋಝಿಕೋಡ್ ಜಿಲ್ಲೆಯ ಪೆರಂಬ್ರಾ ಕ್ಷೇತ್ರದ ಶಾಸಕಿಯಾಗಿರುವ ಫಾತಿಮಾ ಅವರು ಇತ್ತೀಚೆಗೆ ತಮ್ಮ ಕ್ಷೇತ್ರದಲ್ಲಿ ಹೋಟೆಲ್ ಒಂದರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ದೀಪ ಬೆಳಗಿದ್ದರು. ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳು ಇಂತಹ ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗಬಹುದೇ ಎಂಬ ಬಗ್ಗೆ ಈಗ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.

ಧಾರ್ಮಿಕ ಸಂಘಟನೆಯ ಆಕ್ಷೇಪ

ಕೇರಳದ ಪ್ರಮುಖ ಸುನ್ನಿ-ಶಾಫಿ ಇಸ್ಲಾಮಿಕ್ ವಿದ್ವಾಂಸರ ಸಂಘಟನೆಯಾದ ‘ಸಮಸ್ತ ಕೇರಳ ಜಮೀಯತುಲ್ ಉಲಮಾ(Samastha Kerala Jamiyyathul Ulama)’ ಈ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದೆ. ಈ ಕುರಿತು ಸುದೀರ್ಘ ಸಭೆ ನಡೆಸಿ ಪ್ರಕಟಣೆ ಹೊರಡಿಸಿರುವ ಸಮಸ್ತ ಸೆಂಟ್ರಲ್ ಮುಶಾವರಾ (ಕೇಂದ್ರ ಸಮಿತಿ), “ಮುಸ್ಲಿಮರು ಇತರ ಧರ್ಮಗಳ ಧಾರ್ಮಿಕ ಆಚರಣೆಗಳು ಮತ್ತು ಇಸ್ಲಾಮಿಕ್ ಬೋಧನೆಗಳಲ್ಲಿ ಇಲ್ಲದ ಪದ್ಧತಿಗಳಿಂದ ದೂರವಿರಬೇಕು,” ಎಂದು ಕರೆ ನೀಡಿದೆ.


ಇತಿಹಾಸದ ಪ್ರಕಾರ ನಿಲವಿಳಕ್ಕು (ದೀಪ) ಬೆಳಗಿಸುವುದು ಮುಸ್ಲಿಮೇತರರ ಒಂದು ವಿಶಿಷ್ಟ ಧಾರ್ಮಿಕ ವಿಧಿಯಾಗಿದೆ. ಮುಸ್ಲಿಮರು ಕೋಮು ಸೌಹಾರ್ದತೆಯನ್ನು ಕಾಪಾಡುವ ಜೊತೆಜೊತೆಗೇ ಇಂತಹ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು. ಆದರೆ, ಕೇವಲ ಕತ್ತಲೆಯನ್ನು ಓಡಿಸಲು, ಬೆಳಕಿನ ಮೂಲವಾಗಿ ಮಾತ್ರ ದೀಪವನ್ನು ಬಳಸುವುದು ತಪ್ಪಲ್ಲ,” ಎಂದು ಸಂಘಟನೆ ಸ್ಪಷ್ಟಪಡಿಸಿದೆ.

ಧರ್ಮದಿಂದಲೇ ಹೊರಹಾಕುವ ಎಚ್ಚರಿಕೆ?

ಈ ವಿವಾದದ ಕುರಿತು ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ಸಮಸ್ತ ಮುಖಂಡ ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ಇಸ್ಲಾಂ ಧರ್ಮದ ಕಠಿಣ ನಿಲುವುಗಳನ್ನು ನೆನಪಿಸಿದ್ದಾರೆ.

ಇಸ್ಲಾಂ ಧರ್ಮವು ಇತರ ಧರ್ಮದವರೊಂದಿಗೆ ಸೌಹಾರ್ದತೆ ಮತ್ತು ಸಹಿಷ್ಣುತೆಯಿಂದ ಇರಲು ಕಲಿಸುತ್ತದೆ. ಆದರೆ ಇತರ ಧರ್ಮಗಳ ಆಚರಣೆಗಳನ್ನು ಅಳವಡಿಸಿಕೊಳ್ಳಲು ಕಟ್ಟುನಿಟ್ಟಿನ ನಿಷೇಧವಿದೆ. ಬೇರೆ ಧರ್ಮದ ನಂಬಿಕೆಗಳನ್ನು ಒಪ್ಪಿಕೊಂಡು ಈ ರೀತಿ ದೀಪ ಬೆಳಗಿದರೆ, ಅವರು ಇಸ್ಲಾಂ ಧರ್ಮದ ಚೌಕಟ್ಟಿನಿಂದಲೇ ಹೊರಹೋದಂತೆ ಅರ್ಥವಾಗುತ್ತದೆ. ಒಂದು ವೇಳೆ ಯಾವುದೇ ನಂಬಿಕೆ ಇಲ್ಲದೆ, ಕೇವಲ ಇತರರನ್ನು ಅನುಕರಿಸಲು ಹೀಗೆ ಮಾಡಿದರೂ ಅದು ನಿಷೇಧಿತ ಮತ್ತು ಪಾಪದ ಕೆಲಸವಾಗಿದೆ,” ಎಂದು ಫೈಝಿ ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

ಮತ್ತೊಂದೆಡೆ, ಶಾಸಕಿ ಫಾತಿಮಾ ತಪ್ಪಿಯಾ ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಧರ್ಮಗುರುಗಳ ಹಠಮಾರಿ ಧೋರಣೆಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗುವುದು ಯಾವುದೇ ಧರ್ಮಕ್ಕೆ ವಿರೋಧಿಯಲ್ಲ. ಭಾರತದ ಹಲವು ಮಸೀದಿಗಳು ಮತ್ತು ದರ್ಗಾಗಳಲ್ಲಿಯೂ ಇಂತಹ ದೀಪಗಳನ್ನು ನಾವು ನೋಡಿದ್ದೇವೆ. ಮುಸ್ಲಿಂ ಸಮುದಾಯದ ಹೆಣ್ಣುಮಗಳೊಬ್ಬಳು ಶಾಸಕಿಯಾಗಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಹೆಮ್ಮೆ ಪಡಬೇಕು,” ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಪ್ರಗತಿಪರ ಚಿಂತಕರು ಕೂಡ ಶಾಸಕಿಯ ಬೆಂಬಲಕ್ಕೆ ನಿಂತಿದ್ದು, ಇದು ಕೇವಲ ಕೇರಳದ ಸಾಂಸ್ಕೃತಿಕ ಆಚರಣೆಯಾಗಿದೆಯೇ ಹೊರತು ಧಾರ್ಮಿಕ ಆಚರಣೆಯಲ್ಲ ಎಂದು ವಾದಿಸುತ್ತಿದ್ದಾರೆ.


ಇದನ್ನೂ ಓದಿ…

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಕ್ಷೇತ್ರ ಸಮಿತಿ ಬೆಳ್ತಂಗಡಿ ವತಿಯಿಂದ “ಆಟಿದ ಕಮ್ಮೆನ ಬೊಕ್ಕಗೊಬ್ಬು”

ಟಾಪ್ ಸುದ್ದಿಗಳು, ವಿದೇಶ

ಟೋಕಿಯೋ : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

⚠️ Contents are protected on this website.