ಬೆಂಗಳೂರು, ಡಿ. 29 : ಸೈಬರ್ ವಂಚಕರು ಒಂದಲ್ಲ ಒಂದು ರೀತಿಯಲ್ಲಿ ವಂಚಿಸುತ್ತಲೇ ಇರುತ್ತಾರೆ. ಅದರಲ್ಲೂ ಹಬ್ಬಗಳು, ಹೊಸ ವರ್ಷದಂತಹ ವಿಶೇಷ ಸಂದರ್ಭಗಳನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ನಕಲಿ ಜಾಲವನ್ನು ಹರಡಿ, ವಂಚಿಸುತ್ತಿದ್ದಾರೆ. ಆಫರ್‌ಗಳು, ಗಿಫ್ಟ್‌ಗಳು, ಕ್ಯಾಶ್‌ಬ್ಯಾಕ್ ಎನ್ನುವ ಆಕರ್ಷಕ ಸಂದೇಶಗಳನ್ನು ವಾಟ್ಸ್‌ಆಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಕಳುಹಿಸಲಾಗುತ್ತಿದೆ. ಇಂತಹ ಸಂದೇಶಗಳಲ್ಲಿರುವ ಲಿಂಕ್‌ಗಳನ್ನು ತಿಳಿಯದೇ ಒಂದು ಬಾರಿ ಕ್ಲಿಕ್ ಮಾಡಿದರೂ ನಿಮ್ಮ ಬ್ಯಾಂಕ್ ಖಾತೆ ಲೂಟಿ ಆಗುವುದು ಖಚಿತ. ಅಲ್ಲದೇ, ಬೇರೆ ರೀತಿಯಲ್ಲೂ ಅವರು ನಿಮ್ಮನ್ನು ಕಾಡಬಹುದು.
ಸೈಬರ್ ವಂಚಕರ ಮೋಸದ ಜಾಲಕ್ಕೆ ಸಾರ್ವಜನಿಕರು ಬಲಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಲಿಂಕ್‌ಗಳು, ಅನುಮಾನಾಸ್ಪದ ಆಫರ್ ಸಂದೇಶಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ವಿಶೇಷವಾಗಿ ಹೊಸ ವರ್ಷದ ಶುಭಾಶಯಗಳನ್ನು ಕಳುಹಿಸುವಾಗ ಸಾಮಾಜಿಕ ಜಾಲತಾಣದ ಲಿಂಕ್‌ಗಳ ಬದಲು ಸಾಮಾನ್ಯ ಟೆಕ್ಸ್ಟ್ ಮೆಸೇಜ್ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೇ ಜಾಗೃತಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ.
ವಂಚನೆಗೆ ಒಳಗಾಗುವವರು ಇರುವವರೆಗೆ ವಂಚಕರು ಇದ್ದೇ ಇರುತ್ತಾರೆ ಎನ್ನುವ ಮಾತಿದೆ. ನೀವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಜಾಗರೂಕತೆಯಿಂದ, ಎಚ್ಚರದಿಂದ ಬಳಸಿಕೊಳ್ಳಿ. ಯಾವುದೇ ರೀತಿಯಲ್ಲೂ ವಂಚಕರ ಜಾಲಕ್ಕೆ ಸಿಲುಕಬೇಡಿ. ಒಂದು ನೆನಪಿರಲಿ, ಯಾವುದೇ ಕಂಪೆನಿಗಳು ಸಂದೇಶಗಳನ್ನು ಹಂಚಿದ ಮಾತ್ರಕ್ಕೆ ಉಚಿತವಾಗಿ ಯಾವುದೇ ಗಿಪ್ಟ್, ಆಫರ್ ಅಥವಾ ಹಣವನ್ನು ನೀಡುವುದಿಲ್ಲ.

